ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಯಾನ ಸೇವೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ, ವಿಮಾನ ಸಂಪರ್ಕವನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ತಕ್ಷಣ ಆರ್ಥಿಕ ನೆರವು ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ. ಕಲಬುರಗಿ, ಬೀದರ್ ಹಾಗೂ ವಿಜಯನಗರ ವಿಮಾನ ನಿಲ್ದಾಣಗಳಿಗೆ ನೀಡುತ್ತಿರುವ ಮಾದರಿಯಲ್ಲಿಯೇ ಶಿವಮೊಗ್ಗಕ್ಕೂ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಯೋಜನೆಯಡಿ ಅನುದಾನ ನೀಡಬೇಕು. ಕನಿಷ್ಠ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆಯಾದರೂ ನಿರಂತರವಾಗಿ ಮುಂದುವರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಕುರಿತು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿರುವ ಅವರು, ಈ ಸಂಬಂಧ ವಿಸ್ತೃತವಾಗಿ ಮಾತನಾಡಿದ್ದಾರೆ. ಪ್ರಯಾಣಿಕರ ಸಂಚಾರಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣಗಳನ್ನು ಅಂಡರ್‌ಸರ್ವ್ಡ್ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಈ ಮಾನದಂಡದ ಪ್ರಕಾರ ಕರ್ನಾಟಕದಲ್ಲಿ ಮೈಸೂರು ವಿಮಾನ ನಿಲ್ದಾಣ ಮಾತ್ರ ಅರ್ಹವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ನಿಯಮದಡಿ ಅರ್ಹತೆ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ವಿಮಾನಯಾನ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರ್ಥಿಕ ನೆರವು ಒದಗಿಸಿದರೆ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ವಿಮಾನ ಸೇವೆ ಒದಗಿಸಲು ಸಿದ್ಧವಿರುವುದಾಗಿ ಸ್ಟಾರ್ ಏರ್‌ಲೈನ್ಸ್ ತಿಳಿಸಿದೆ ಎಂದು ಸಂಸದರು ಹೇಳಿದ್ದಾರೆ.
ಸ್ಟಾರ್ ಏರ್‌ಲೈನ್ಸ್ ಮಾಲೀಕ ಸಂಜಯ್ ಘೋಡಾವತ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಮ್ಮ ಮನವಿಯ ಮೇರೆಗೆ ಈ ಕುರಿತು ರಾಜ್ಯ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದಾರೆ ಎಂದು ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಒಂದು ವಿಮಾನ ಮಾರ್ಗಕ್ಕೆ ಸುಮಾರು ₹14 ಕೋಟಿ ವೆಚ್ಚವಾಗಲಿದ್ದು, 4 ಮಾರ್ಗಗಳಿಗೂ ಏಕಕಾಲದಲ್ಲಿ ಅನುದಾನ ಒದಗಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಶಿವಮೊಗ್ಗ–ಬೆಂಗಳೂರು ಹಾಗೂ ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ತಾವು ಕೂಡ ಕಳೆದ 2 ದಿನಗಳಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ, ಸಂಬಂಧಿಸಿದ ಮನವಿ ಪತ್ರವನ್ನು ತಲುಪಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸಂಸದ ಬೇಡಿಕೆ
- ಕಲಬುರಗಿ, ಬೀದರ್ ಹಾಗೂ ವಿಜಯನಗರ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಶಿವಮೊಗ್ಗಕ್ಕೂ VGF ಅನುದಾನ ನೀಡಬೇಕು.
- ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಲು ಅಗತ್ಯ ಆರ್ಥಿಕ ಪ್ರೋತ್ಸಾಹ ಒದಗಿಸಬೇಕು.
- ಸಾಧ್ಯವಾದರೆ ಶಿವಮೊಗ್ಗ–ಹೈದರಾಬಾದ್ ಮಾರ್ಗಕ್ಕೂ ಅನುದಾನ ನೀಡಿ ವಿಮಾನಯಾನ ಮುಂದುವರಿಸಬೇಕು.
- ಉಡಾನ್ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ 5ರಿಂದ 6 ತಿಂಗಳ ಮಧ್ಯಂತರ ಆರ್ಥಿಕ ನೆರವು ನೀಡಬೇಕು.
- ವಿಮಾನ ನಿಲ್ದಾಣದ ವಿಚಾರದಲ್ಲಿ ಮಲೆನಾಡಿನ ಜನರ ಮೇಲಿನ ಮಲತಾಯಿ ಧೋರಣೆ ಕೈಬಿಡಬೇಕು.
- ನವೆಂಬರ್ 27ರ ನಂತರವೂ ವಿಮಾನಯಾನ ಸೇವೆಗಳು ಮುಂದುವರಿಯುವಂತೆ ತಕ್ಷಣ ನಿರ್ಧಾರ ಕೈಗೊಳ್ಳಬೇಕು.
ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಬೀದರ್ ವಿಮಾನ ನಿಲ್ದಾಣಗಳಿಗೆ ಉಡಾನ್ ಯೋಜನೆಯ ಹೊರತಾಗಿಯೂ ರಾಜ್ಯ ಸರ್ಕಾರವೇ ತಲಾ ₹14 ಕೋಟಿ ಅನುದಾನ ನೀಡುವ ಮೂಲಕ ವಿಮಾನಯಾನ ಸೇವೆ ಮುಂದುವರಿಸುತ್ತಿದೆ. ಅದೇ ಮಾದರಿಯಲ್ಲಿ ಶಿವಮೊಗ್ಗಕ್ಕೂ ನೆರವು ನೀಡಲು ಸರ್ಕಾರ ಮುಂದಾಗಬೇಕು.
ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರವೇ ತಲಾ ₹14 ಕೋಟಿ ನೆರವು ನೀಡುತ್ತಿರುವಾಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕೆ ಮಲತಾಯಿ ಧೋರಣೆ ತೋರಲಾಗುತ್ತಿದೆ? ಮಲೆನಾಡಿನ ಜನರಿಗೆ ವಿಮಾನ ಸಂಪರ್ಕದ ಅಗತ್ಯವಿಲ್ಲವೇ ಎಂಬುದು ನಮ್ಮ ಪ್ರಶ್ನೆ.ಬಿ.ವೈ. ರಾಘವೇಂದ್ರ, ಸಂಸದರು
