ಸುದ್ದಿಯ ಸ್ಥಳ: Chikkamagaluru, Karnataka
ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಜಿಲ್ಲೆಯಲ್ಲಿ ಜಿಂಕೆ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ಇನ್ನೊಂದೆಡೆ ಚಿಕ್ಕಮಗಳೂರು ನಗರದಲ್ಲಿ ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ₹7.50 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ದೋಚಿದ್ದಾರೆ. ಮತ್ತೊಂದೆಡೆ ಕಡೂರಿನ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯ ಚಿನ್ನಾಭರಣ ಕಳುವಾಗಿರುವ ಪ್ರಕರಣ ವರದಿಯಾಗಿದೆ.
ಜಿಂಕೆ ಮಾಂಸ ವಶ; ಇಬ್ಬರ ಬಂಧನ
ಚಿಕ್ಕಮಗಳೂರಿನ ಮಾಗಡಿ ಹ್ಯಾಂಡ್ಪೋಸ್ಟ್ ಸಮೀಪದ ಮನೆಯೊಂದರಲ್ಲಿ ಜಿಂಕೆ ಮಾಂಸ ಬೇಯಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಬೇಯಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ ದೇವರಾಜು ಅವರನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಟಿಪ್ಪುನಗರ ನಿವಾಸಿ ಕುಮಾರ್ ಎಂಬಾತ ಜಿಂಕೆ ಮಾಂಸ ಮಾರಾಟ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಆಧರಿಸಿ ಕುಮಾರ್ನನ್ನೂ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಜಿಂಕೆ ಮಾಂಸ ಮಾರಾಟ ಪ್ರಕರಣದಲ್ಲಿ ಬೇಲೂರಿನ ಅಲಿ ಹಾಗೂ ಯೋಗೀಶ್ ಗೌಡ ಪ್ರಮುಖ ಪಾತ್ರ ವಹಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಇಬ್ಬರು ತಲೆಮರೆಸಿಕೊಂಡಿದ್ದಾರೆ.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್, ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್, ನಾರಾಯಣ, ಪ್ರದೀಪ್, ಮಂಜುನಾಥ್ ಮತ್ತು ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೊಲೀಸರ ಸೋಗಿನಲ್ಲಿ ₹7.50 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳವು
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಪೊಲೀಸರಂತೆ ನಟಿಸಿದ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ₹7.50 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ವಂಚನೆಯ ಮೂಲಕ ಕಳವು ಮಾಡಿದ್ದಾರೆ.ನಗರದ ನಿವಾಸಿ ರಾಧಮ್ಮ ಎಂಬುವವರು ಬೇಲೂರಿನಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ತೆರಳಲು ವಿಜಯಪುರ ಉರ್ದು ಶಾಲೆಯ ಸಮೀಪದಿಂದ ಆಟೊ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅವರನ್ನು ತಡೆದು ಮಾತನಾಡಿಸಿದ್ದಾರೆ. ತಾವು ಪೊಲೀಸರು ಎಂದು ಪರಿಚಯಿಸಿಕೊಂಡ ಅಪರಿಚಿತರು, ಬಡಾವಣೆಯಲ್ಲಿ ಸರಗಳ್ಳರು ಓಡಾಡುತ್ತಿದ್ದಾರೆ. ಹೀಗಾಗಿ ಕತ್ತಿನಲ್ಲಿರುವ ಚಿನ್ನದ ಸರವನ್ನು ತೆಗೆದು ಕಾಗದದಲ್ಲಿ ಸುತ್ತಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ರಾಧಮ್ಮ ಅವರಿಗೆ ಸೂಚಿಸಿದ್ದಾರೆ. ಬಳಿಕ ಅವರೇ ಚಿನ್ನದ ಸರವನ್ನು ಕಾಗದದಲ್ಲಿ ಸುತ್ತಿಕೊಡುವುದಾಗಿ ಹೇಳಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಮತ್ತೊಬ್ಬ ವ್ಯಕ್ತಿ ಅಸಲಿ ಚಿನ್ನದ ಸರದ ಬದಲಾಗಿ ನಕಲಿ ಸರವಿದ್ದ ಕಾಗದದ ಪೊಟ್ಟಣವನ್ನು ಮಹಿಳೆಗೆ ನೀಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪರಿಚಿತರು ನೀಡಿದ ಕಾಗದದ ಪೊಟ್ಟಣವನ್ನು ತೆಗೆದುಕೊಂಡು ಆಟೊದಲ್ಲಿ ತೆರಳಿದ ರಾಧಮ್ಮ, ಅದನ್ನು ಬಿಚ್ಚಿ ನೋಡಿದಾಗ ಅಸಲಿ ಮಾಂಗಲ್ಯ ಸರದ ಬದಲಾಗಿ ನಕಲಿ ಸರ ಇರುವುದು ಗೊತ್ತಾಗಿದೆ. ತಾವು ವಂಚನೆಗೊಳಗಾಗಿರುವುದನ್ನು ಅರಿತ ಮಹಿಳೆ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಡೂರಿನ ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕಳವು
ಕಡೂರು ಪಟ್ಟಣದ ಮಲ್ಲೇಶ್ವರದಲ್ಲಿರುವ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಕಳುವಾಗಿರುವ ಘಟನೆ ನಡೆದಿದೆ.ನಂಜನಗೂಡು ಮೂಲದ ನಿವೇದಿತಾ ಎಂಬುವವರು ನವೆಂಬರ್ 15ರಂದು ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಬ್ಯಾಗ್ನಲ್ಲಿ ಇರಿಸಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಬಳಿಕ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಿವೇದಿತಾ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
