ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಯುವಕರು ಉದ್ಯೋಗಕ್ಕಾಗಿ ಕಾಯುವ ಬದಲು ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ರಾಜ್ಯ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿಸೆಂಬರ್ 25ರಿಂದ 27ರವರೆಗೆ ಬೆಂಗಳೂರಿನಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ (GAVS) ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ 3 ದಿನಗಳ ಕಾಲ ನಡೆಯಲಿರುವ ಈ ಜಾಗತಿಕ ಸಮಾವೇಶದಲ್ಲಿ 28 ರಾಷ್ಟ್ರಗಳ ಹೂಡಿಕೆದಾರರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಹಾಗೂ ಹೂಡಿಕೆ ಅವಕಾಶಗಳನ್ನು ಕಲ್ಪಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯ ಆರ್ಯವೈಶ್ಯ ಮಹಾಸಭಾ ಶಿಕ್ಷಣ, ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜನಾಂಗದ ಅಭಿವೃದ್ಧಿಯೊಂದಿಗೆ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೂ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಚಟುವಟಿಕೆಗಳ ಮುಂದುವರಿದ ಭಾಗವಾಗಿ ಯುವಜನರಲ್ಲಿ ಉದ್ಯಮಶೀಲತೆ ಬೆಳೆಸಲು GAVS ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮಾವೇಶವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಲಿದ್ದು, ಆಂಧ್ರಪ್ರದೇಶದ ಸಚಿವ ಟಿ.ಜಿ. ಭರತ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 28 ರಾಷ್ಟ್ರಗಳ ಹೂಡಿಕೆದಾರರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಸಮಾವೇಶದ ಉಪಾಧ್ಯಕ್ಷರಾಗಿ ನೇತೃತ್ವ ವಹಿಸಲಿದ್ದಾರೆ.
ಜಾಗತಿಕ ಮಟ್ಟದ ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಉದ್ಯೋಗಾಕಾಂಕ್ಷಿಗಳಾಗಿ ಮಾತ್ರ ಉಳಿಯದೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಉದ್ಯಮಿಗಳಾಗಿ ಯುವಕರು ರೂಪುಗೊಳ್ಳಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅರುಣ್ ಹೇಳಿದ್ದಾರೆ.
- ಸಮಾವೇಶದ ಅಂಗವಾಗಿ ‘ಟೆಕ್4ಭಾರತ್’ (Tech4Bharat) ಹ್ಯಾಕಥಾನ್ ಆಯೋಜಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಕ್ಷೇತ್ರದ 8 ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವುದು ಹ್ಯಾಕಥಾನ್ನ ಪ್ರಮುಖ ಉದ್ದೇಶವಾಗಿದೆ.
- ವಿದ್ಯಾರ್ಥಿಗಳು ತಮ್ಮ ನವೀನ ಆಲೋಚನೆಗಳು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಂಡು ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸಲು ಈ ಹ್ಯಾಕಥಾನ್ ಅವಕಾಶ ಕಲ್ಪಿಸಲಿದೆ. ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವವರಿಗೆ ₹15 ಲಕ್ಷದವರೆಗೆ ಬಹುಮಾನ ನೀಡಲಾಗುವುದು ಎಂದು ಡಿ.ಎಸ್. ಅರುಣ್ ತಿಳಿಸಿದ್ದಾರೆ.
- ಪಿಯುಸಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಂಡಗಳಾಗಿ ನೋಂದಣಿ ಮಾಡಿಕೊಂಡು ಹ್ಯಾಕಥಾನ್ನಲ್ಲಿ ಭಾಗವಹಿಸಬಹುದಾಗಿದೆ. ನೋಂದಾಯಿತ ವಿದ್ಯಾರ್ಥಿಗಳ ತಂಡಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
- ಸಮಾವೇಶ ಹಾಗೂ ಹ್ಯಾಕಥಾನ್ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳು ಹೆಚ್ಚಿನ ಮಾಹಿತಿಗಾಗಿ TheGAVS.com ವೆಬ್ಸೈಟ್ ಸಂಪರ್ಕಿಸಬಹುದು ಎಂದು ಡಿ.ಎಸ್. ಅರುಣ್ ತಿಳಿಸಿದ್ದಾರೆ.
