ಪಿಎಸ್‌ಐ ಎಂದು ನಂಬಿಸಿ ಹಣ, ಚಿನ್ನ, ಐಷಾರಾಮಿ ಕಾರು ಪಡೆದು ವಂಚನೆ! ಲೇಡಿ ಬಂಧನ

ಹಂಚಿಕೊಳ್ಳಿ
WhatsApp Facebook X Telegram
Fake Woman PSI Arrested in Chikkamagaluru Over Money, Gold and Luxury Car Fraud Allegations
Fake Woman PSI Arrested in Chikkamagaluru Over Money, Gold and Luxury Car Fraud Allegations

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಂಡು ನಂಬಿಸಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸಿರುವ ಆರೋಪದ ಮೇಲೆ ನಕಲಿ ಲೇಡಿ ಪಿಎಸ್‌ಐ ಒಬ್ಬರನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಮೂಲದ ನಿವೇದಿತಾ ಗೌಡ ಅಲಿಯಾಸ್ ಅಮ್ಮು ಗೌಡ ಬಂಧಿತ ಆರೋಪಿ.

ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಕೆಫೆ ನಡೆಸುತ್ತಿರುವ ಲಕ್ಷ್ಮಿ ಎಂಬುವರ ಮನೆಯಲ್ಲಿ ಕಳೆದ ಎರಡು ತಿಂಗಳಿಂದ ನಿವೇದಿತಾ ತಂಗಿದ್ದಳು. ತಾನು ಪೊಲೀಸ್ ಅಧಿಕಾರಿ ಎಂಬಂತೆ ಕಾಣಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ರೀತಿಯಲ್ಲಿ ಹೇರ್‌ ಕಟಿಂಗ್ ಮಾಡಿಸಿಕೊಂಡು, ಅದಕ್ಕೆ ತಕ್ಕಂತೆ ಉಡುಪು ಧರಿಸುತ್ತಿದ್ದಳು. ತಾನು ಕೆಲಸಕ್ಕೆ ರಜೆ ಹಾಕಿ ಬಂದಿರುವ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ನಂಬಿಸಿದ್ದಳಂತೆ.

ಅಲ್ಲದೆ ಲಕ್ಷ್ಮಿಯವರ ಕೆಫೆಗೆ ಬರುತ್ತಿದ್ದ ಮಹಿಳೆಯರು ಹಾಗೂ ಯುವಕರೊಂದಿಗೆ ಪರಿಚಯ ಬೆಳೆಸಿಕೊಳ್ಳುತ್ತಿದ್ದ ನಿವೇದಿತಾ, ಅವರ ವಿಶ್ವಾಸ ಗಳಿಸಿಕೊಂಡು ಹಣ ಹಾಗೂ ಚಿನ್ನ ಪಡೆದು ವಂಚಿಸುತ್ತಿದ್ದಳು ಎಂಬುದು ಆರೋಪ. ಮೇಲಾಗಿ ಪರಿಚಯಸ್ಥರಿಂದ ಓಡಾಟಕ್ಕಾಗಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ನಂತರ ಆ ಕಾರುಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆರೋಪವೂ ನಿವೇದಿತಾ ವಿರುದ್ಧ ಕೇಳಿಬಂದಿದೆ.

ಈ ಸಂಬಂಧ ನಿವೇದಿತಾ ವಿರುದ್ಧ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 25ಕ್ಕೂ ಅಧಿಕ ಮಂದಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕೆಯಿಂದ ವಂಚನೆಗೊಳಗಾಗಿರುವ 20ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ನಿವೇದಿತಾಳನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor