ಶಿವಮೊಗ್ಗ ಶಾರ್ಟ್ ನ್ಯೂಸ್ | ಸೊಸೆ ಕಾಟಕ್ಕೆ ಮಾವ ಸಾವು, ಅಣ್ತಮ್ಮರ ಕಲಹಕ್ಕೆ ಸೋದರ ಆತ್ಮಹತ್ಯೆ ! ಬಾರಲ್ಲಿ ಸಾಲ, ಹಲ್ಲೆ ಆರೋಪ! ಗ್ರಾಹಕ ನೇಣಿಗೆ ಶರಣು

ಹಂಚಿಕೊಳ್ಳಿ
WhatsApp Facebook X Telegram
Shivamogga Morning News, Shivamogga Short News,
Shivamogga Morning News, Shivamogga Short News,

ಸುದ್ದಿಯ ಸ್ಥಳ: Shikaripura, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತಿನ ಶಿವಮೊಗ್ಗ ಶಾರ್ಟ್ ನ್ಯೂಸ್ ನಲ್ಲಿ ಮೂರು ಪ್ರಕರಣಗಳಿವೆ. ಜಿಲ್ಲೆಯಲ್ಲಿ ಸಾಲದ ವಿಚಾರವಾಗಿ ಹಲ್ಲೆ ನಡೆಸಿ ಅವಮಾನಿಸಿದ ಆರೋಪ, ಕುಟುಂಬದ ಸದಸ್ಯರ ನಡುವಿನ ಕಲಹ ಹಾಗೂ ಸಹೋದರರ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 3 ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಹೊಸಮನೆ ಬಡಾವಣೆ, ಶಿಕಾರಿಪುರ ತಾಲೂಕಿನ ನೆರಲಗಿ ಹಾಗೂ ಆಗ್ರಹಾರ ಮುಚಡಿ ಗ್ರಾಮಗಳಲ್ಲಿ ಘಟನೆಗಳು ನಡೆದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಶಾರ್ಟ್ ನ್ಯೂಸ್ / ಸಾಲದ ವಿಚಾರದಲ್ಲಿ ಹಲ್ಲೆ, ಅವಮಾನ ಆರೋಪ: ವ್ಯಕ್ತಿ ಸಾವು

ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ ಶರತ್ ಬಾಬು (41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಬಾರ್ ಒಂದರಲ್ಲಿ ₹35,000 ಸಾಲ ಮಾಡಿದ್ದ ವಿಚಾರವಾಗಿ ಬಾರ್‌ನ ಕ್ಯಾಶಿಯರ್ ಹಲ್ಲೆ ನಡೆಸಿ, ಬೈಕ್ ಜಪ್ತಿ ಮಾಡಿ ಅವಮಾನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ನವೆಂಬರ್ 11ರ ರಾತ್ರಿ ಸಾಲದ ವಿಚಾರವಾಗಿ ಬಾರ್ ಕ್ಯಾಶಿಯರ್ ಶರತ್ ಬಾಬು ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಘಟನೆಯಿಂದ ನೊಂದಿದ್ದ ಶರತ್ ಬಾಬು ನವೆಂಬರ್ 12ರ ರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಟುಂಬದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾರ್ ಕ್ಯಾಶಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಶಾರ್ಟ್ ನ್ಯೂಸ್ / ಸೊಸೆ ಸೇರಿದಂತೆ ಐವರ ವಿರುದ್ಧ ಕಿರುಕುಳ ಆರೋಪ: ಮಾವ ಆತ್ಮಹತ್ಯೆ

ಶಿಕಾರಿಪುರ ತಾಲೂಕಿನ ನೆರಲಗಿ ಗ್ರಾಮದಲ್ಲಿ ಕುಟುಂಬದ ಕಲಹದ ಹಿನ್ನೆಲೆಯಲ್ಲಿ ಶಿವಮೂರ್ತಿ (55) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊಸೆ ಹಾಗೂ ಆಕೆಯ ಕುಟುಂಬದ ಸದಸ್ಯರು ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ರೇಣುಕಮ್ಮ ಆರೋಪಿಸಿದ್ದಾರೆ. ಶಿವಮೂರ್ತಿ ಅವರು ಕುರಿ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಗ್ರಾಮದ ಅರುಣಗೌಡ ಎಂಬುವವರ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುರಿಗಾಹಿ ಗಂಗಪ್ಪ ಮೃತದೇಹವನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ ಶಿವಮೂರ್ತಿ ಅವರ ಜೇಬಿನಲ್ಲಿ ಮರಣಪತ್ರ ಪತ್ತೆಯಾಗಿದೆ.

ಮರಣಪತ್ರದಲ್ಲಿ ತಮ್ಮ ಸಾವಿಗೆ ಸೊಸೆಯೇ ನೇರ ಕಾರಣವಾಗಿದ್ದು, ತಮ್ಮ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ನೀಡಬೇಕು ಎಂದು ಬರೆದಿರುವುದಾಗಿ ತಿಳಿದುಬಂದಿದೆ. ಪೊಲೀಸರು ಮರಣಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೂರ್ತಿ ಅವರ ಪುತ್ರ ಸಂತೋಷ್ ಅವರು ಉಡುಗಣಿಯ ಯುವತಿಯೊಬ್ಬರನ್ನ 7–8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕಳೆದ 2 ವರ್ಷಗಳಿಂದ ಕುಟುಂಬದ ಸದಸ್ಯರ ನಡುವೆ ವಿವಿಧ ಕಾರಣಗಳಿಗೆ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಈ ಹಿಂದೆ ರಾಜಿ ಮೂಲಕ ವಿವಾದಗಳನ್ನು ಬಗೆಹರಿಸಲಾಗಿತ್ತು.

ಆದರೆ, ಮತ್ತೆ ಕುಟುಂಬದಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಸೃಷ್ಟಿ ಅವರು ಪತಿ, ಅತ್ತೆ, ಮಾವ ಹಾಗೂ ಮೈದುನನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ನಡುವೆ ಸೊಸೆಯ ಕುಟುಂಬದವರು ಮನೆಗೆ ಬಂದು ಗಲಾಟೆ ನಡೆಸಿದ್ದರಿಂದ ತಮ್ಮ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೇಣುಕಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸೃಷ್ಟಿ, ನಾಗಪ್ಪ, ರೇಣುಕಮ್ಮ, ವಿನಾಯಕ ಹಾಗೂ ಮನೋಜ್ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನು ನೋಂದಣಿ ವಿವಾದ: ನಾಲ್ವರು ಸಹೋದರರ ವಿರುದ್ಧ ಪ್ರಕರಣ

ಶಿಕಾರಿಪುರ ತಾಲೂಕಿನ ಆಗ್ರಹಾರ ಮುಚಡಿ ಗ್ರಾಮದಲ್ಲಿ ಸಹೋದರರ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಶಿವಾನಂದಪ್ಪ ಬಾಳೇರ (60) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐವರು ಸಹೋದರರು ಒಟ್ಟಾಗಿ ಖರೀದಿಸಿದ್ದ 1 ಎಕರೆ ಜಮೀನಿನ ನೋಂದಣಿ ಸಂದರ್ಭದಲ್ಲಿ ಶಿವಾನಂದಪ್ಪ ಅವರ ಹೆಸರನ್ನು ಕೈಬಿಟ್ಟಿರುವ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಈ ಸಂಬಂಧ ಗ್ರಾಮಸ್ಥರು ಪಂಚಾಯಿತಿ ನಡೆಸಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬಳಿಕ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಬೆಳವಣಿಗೆಗಳಿಂದ ಶಿವಾನಂದಪ್ಪ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಸಂಜೆ ಮನೆಯಿಂದ ಹೊರಗೆ ತೆರಳಿದ್ದ ಅವರು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಬಳಿಕ ಗ್ರಾಮದ ಬಸ್ ನಿಲ್ದಾಣದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮೃತಪಟ್ಟಿದ್ದಾರೆ.ತಮ್ಮ ಪತಿಯ ಸಾವಿಗೆ ಅವರ ಸಹೋದರರಾದ ಪರಮೇಶಪ್ಪ, ಲೋಕಪ್ಪ, ಎಚ್.ವಿ.ಮಲ್ಲೇಶಪ್ಪ ಹಾಗೂ ಎಸ್.ವಿ.ಮಂಜಪ್ಪ ಕಾರಣ ಎಂದು ಶಿವಾನಂದಪ್ಪ ಅವರ ಪತ್ನಿ ಈರಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನ ಆಧಾರದಲ್ಲಿ ನಾಲ್ವರು ಸಹೋದರರ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾನಸಿಕ ಸಂಕಷ್ಟ ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವವರು ಟೆಲಿ ಮಾನಸ್ ಸಹಾಯವಾಣಿ 14416 ಅಥವಾ ಸಹಾಯ್ 080-25497777, 9886444075 ಸಂಪರ್ಕಿಸಬಹುದು

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor