Sakrebyle Elephant Camp ಶಿವಮೊಗ್ಗ: ವಿಶ್ವ ಆನೆ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆ ದಿನಾಚರಣೆಯನ್ನು ಸರಳ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬಿಡಾರಕ್ಕೆ ಪ್ರವಾಸಿಗರ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ: ಸಿಗಂದೂರಿಗೆ ಹೊರಟಿದ್ದ ಕಾರು ಅಪಘಾತ – 6 ಜನ ಪ್ರಾಣಾಪಾಯದಿಂದ ಪಾರು
ಮಾವುತರು ಆನೆಗಳನ್ನು ವಿವಿಧ ಬಣ್ಣ ಹಾಗೂ ಹೂವುಗಳಿಂದ ಮದುವಣಗಿತ್ತಿಯಂತೆ ಸಿಂಗರಿಸಿದ್ದರು. ನಂತರ ವಿಶೇಷ ಪೂಜೆಯೊಂದಿಗೆ ಶಾಸ್ತ್ರೋಕ್ತವಾಗಿ ದಿನಾಚರಣೆಗೆ ಚಾಲನೆ ನೀಡಲಾಯಿತು. ಬಿಡಾರದ ಸಿಬ್ಬಂದಿ ವರ್ಗ ಭಾಗವಹಿಸಿ ಆನೆಗಳಿಗೆ ಕಬ್ಬು, ಸಿಹಿ ಹಾಗೂ ವಿವಿಧ ಹಣ್ಣುಹಂಪಲುಗಳನ್ನು ತಿನ್ನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಡಿಎಫ್‌ಒ ಪ್ರಸನ್ನ ಪಟಗಾರ್ ಮಾತನಾಡಿ, ಆನೆಗಳ ಸಂರಕ್ಷಣೆಗಾಗಿ ವಿಶ್ವವನ್ನು ಒಂದುಗೂಡಿಸಬೇಕು ಎಂಬ ಥೀಮ್‌ನೊಂದಿಗೆ ಈ ಬಾರಿ ವಿಶ್ವ ಆನೆಗಳ ದಿನಾಚರಣೆಗಳನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ಈವರೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಎಂದಿನಂತೆ ಆನೆ ದಿನಾಚರಣೆ ನಡೆಸುತ್ತಿದ್ದೆವು, ಆದರೆ ಪ್ರಸ್ತುತ ಬಿಡಾರಕ್ಕೆ ನಿರ್ಬಂಧ ಇರುವ ಕಾರಣದಿಂದ ಕ್ರಾಲ್ ನಲ್ಲಿ ಆಚರಿಸುತ್ತಿದ್ದೇವೆ ಎಂದರು. ನಮ್ಮ ಆನೆ ಬಿಡಾರದಲ್ಲಿ ಒಟ್ಟು 19 ಗಂಡು ಮತ್ತು 5 ಹೆಣ್ಣು ಸೇರಿ ಒಟ್ಟು 24 ಆನೆಗಳು ಇವೆ. ಇಂದಿನ ಪೂಜೆಯಲ್ಲಿ 13 ಆನೆಗಳು ಪಾಲ್ಗೊಂಡಿದ್ದವು. ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುವ ಆನೆಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಆನೆಗಳ ಆರೋಗ್ಯದ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಅಡ್ಕಾ ಬಡ್ಕಾ ಆನೆಗೆ ಚಿಕಿತ್ಸೆ ನೀಡಲಾಗಿದ್ದು, ಅದು ಈಗ ಸಂಪೂರ್ಣ ಗುಣಮುಖವಾಗಿದೆ. ವಿಕ್ರಾಂತ್ ಆನೆಗೆ ಸ್ವಲ್ಪ ಕಾಲು ನೋವಿದ್ದು, ಮುಂದಿನ 20 ದಿನಗಳಲ್ಲಿ ಸರಿಯಾಗಲಿದೆ. ಹಾಗೆಯೇ ಸಾಗರ ಆನೆಯೂ ಸಹ ಸಂಪೂರ್ಣವಾಗಿ ಗುಣಮುಖವಾಗಿದೆ. ಬಾಲಣ್ಣ ಸಹ ಸಂಪೂರ್ಣವಾಗಿ ಗುಣವಾಗಿದ್ದು, ಬಾಲಣ್ಣ ಸೇರಿದಂತೆ ಒಟ್ಟು 2 ಆನೆಗಳು ಸದ್ಯ ಮದದಲ್ಲಿವೆ ಎಂದು ವಿವರಿಸಿದರು.
ಆನೆ ಬಿಡಾರಕ್ಕೆ ಪ್ರವೇಶ ಹಾಗೂ ಭದ್ರತಾ ವಿಚಾರಗಳ ಕುರಿತು ಮಾತನಾಡಿದ ಶಿವಮೊಗ್ಗ ವನ್ಯಜೀವ ವಿಭಾಗದ ಡಿಎಫ್‌ಒ, ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಸ್ಒಪಿ ನಿಯಮಗಳನ್ನು ಅಳವಡಿಸುತ್ತಿದ್ದೇವೆ ಎಂದರು. ಇದರ ಭಾಗವಾಗಿ ಬಿಡಾರದಲ್ಲಿ ಬ್ಯಾರಿಕೇಡ್ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದ್ದು, ಈಗಾಗಲೇ ಬಿಡಾರದಲ್ಲಿ 4 ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಮತ್ತು ಇನ್ನು 2 ಸಿಸಿಟಿವಿಗಳನ್ನು ಅಳವಡಿಸಬೇಕಿದೆ ಎಂದು ತಿಳಿಸಿದರು. ಮುಂದುವರಿದು, ಪ್ರವಾಸಿಗರಿಗೆ ಆನೆಗಳಿಗೆ ಸ್ನಾನ ಮಾಡಿಸಲು ಅವಕಾಶ ಇರುವುದಿಲ್ಲ, ಆದರೆ ಆನೆಗಳನ್ನು ನೋಡಲು ಅವಕಾಶ ಇರುತ್ತದೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಬಿಡಾರವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದರು.
