ಶಿವಮೊಗ್ಗದ 19 ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; 6,359 ಅಭ್ಯರ್ಥಿಗಳು ಹಾಜರು! ಹೇಗಿತ್ತು ಎಕ್ಸಾಮ್​ ಇಲ್ಲಿದೆ ಮಾಹಿತಿ!

ಹಂಚಿಕೊಳ್ಳಿ
WhatsApp Facebook X Telegram
Police Constable Recruitment Exam Held at 19 Centres in Shivamogga; 6,359 Candidates Attend
Police Constable Recruitment Exam Held at 19 Centres in Shivamogga; 6,359 Candidates Attend

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್ ಇಲಾಖೆಯ ಸಿಎಆರ್ ಮತ್ತು ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ (Police Constable Recruitment Exam) ಭಾನುವಾರ ಶಿವಮೊಗ್ಗ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು.

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಡೆದ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಪರೀಕ್ಷೆಗೆ ಒಟ್ಟು 7,651 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 6,359 ಅಭ್ಯರ್ಥಿಗಳು ಹಾಜರಾಗಿದ್ದರು. 1,292 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.

ನಗರದ ಎಲ್ಲ 19 ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಮತ್ತು ಅಭ್ಯರ್ಥಿಗಳ ತಪಾಸಣೆಗಾಗಿ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿತ್ತು. 5 ಡಿವೈಎಸ್‌ಪಿ, 19 ಪಿಐ, 38 ಪಿಎಸ್‌ಐ ಸೇರಿದಂತೆ ಒಟ್ಟು 201 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿಸಲಾಗಿತ್ತು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪರೀಕ್ಷಾ ಕೊಠಡಿಗಳಿಗೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಭ್ಯರ್ಥಿಗಳ ಚಲನವಲನ ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ನಿಗಾದಲ್ಲಿರಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 6 ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿತ್ತು. ಈ ಕಾರ್ಯಕ್ಕಾಗಿ ಮುಖ್ಯ ಅಧೀಕ್ಷಕ ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಹಾಗೂ ಜಾಗೃತದಳವನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಲಾಗಿತ್ತು.

ಅಲ್ಲದೆ, ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಪರೀಕ್ಷೆ ಬರೆಯಲು ಆಗಮಿಸಿದ ಅಭ್ಯರ್ಥಿಗಳ ಹಾಲ್ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಿದ ನಂತರ ಫೇಸ್ ರೆಕಗ್ನಿಶನ್ ಮೂಲಕ ಗುರುತು ಪರಿಶೀಲಿಸಲಾಗುತ್ತಿತ್ತು. ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಪರೀಕ್ಷಾ ವಸ್ತ್ರ ಸಂಹಿತೆಯನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ಪೊಲೀಸರು ಪರಿಶೀಲಿಸಿ ಒಳಗೆ ಕಳುಹಿಸಿದರು. ಶಿವಮೊಗ್ಗದ ಡಿವಿಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿಯೂ ಪೊಲೀಸರು ಅಭ್ಯರ್ಥಿಗಳ ತಪಾಸಣೆ ನಡೆಸಿದರು.

ಒಟ್ಟಾರೆ ಶಿಸ್ತಿನ ಇಲಾಖೆಯ ಪರೀಕ್ಷೆಯು ಯಾವುದೇ ಗೊಂದಲಗಳಿಲ್ಲದೆ ಸಸೂತ್ರವಾಗಿ ನಡೆದಿದ್ದು ವಿಶೇಷವಾಗಿತ್ತು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor