ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನಾಡು ಸಿರಿಯಾಯಿತು: ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕದ ಎಚ್ಚರಿಕೆಯ ನುಡಿ! ಏನಿದು?

ಹಂಚಿಕೊಳ್ಳಿ
WhatsApp Facebook X Telegram
Birur Mylaralingeshwara Karnika 2026 Prophecy Meaning and Rajabeedi Utsava
Birur Mylaralingeshwara Karnika 2026 Prophecy Meaning and Rajabeedi Utsava

ಮಲೆನಾಡು ಟುಡೆ ಸುದ್ದಿ / ಬೀರೂರು / ಬೀರೂರಿನ ಸರಸ್ವತಿಪುರಂ ಬಡಾವಣೆಯ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕ ಮಹೋತ್ಸವ ಬುಧವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಪಟ್ಟಣದ ಮಹಾನವಮಿ ಬಯಲಿನಲ್ಲಿ ಬೆಳಗಿನ ಜಾವ 4.30ಕ್ಕೆ ನಡೆದ ಕಾರ್ಣಿಕ ಮಹೋತ್ಸವದಲ್ಲಿ ನಾಡಿನ ಸಮೃದ್ಧಿ, ಸಂಘರ್ಷ ಹಾಗೂ ಎಚ್ಚರಿಕೆಯ ಸಂದೇಶ ಒಳಗೊಂಡ ಕಾರ್ಣಿಕ ವಾಣಿ ಮೊಳಗಿತು. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸೃಷ್ಟಿಗೆ ನಾಡು ಸಿರಿಯಾಯಿತು, ಮದಗಜಗಳು ಕಾದಾಡಿದರು, ಕತ್ತಲೆಯ ದೀಪಕ್ಕೆ ಬೆಳಕಾಯಿತು, ಸರ್ವರು ಎಚ್ಚರದಿಂದಿರಬೇಕಲೇ ಪರಾಕ್ ಎಂಬ ಕಾರ್ಣಿಕ ವಾಣಿಯನ್ನು ಶ್ರೀ ಮೈಲಾರಲಿಂಗೇಶ್ವರಸ್ವಾಮಿಯ ಅರ್ಚಕ ದಶರಥ ಪೂಜಾರರು ನುಡಿದರು.

ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕ

ಕಾರ್ಣಿಕ ಮಹೋತ್ಸವದ ಸಂಪ್ರದಾಯದಂತೆ ಮಂಗಳವಾರ ರಾತ್ರಿ ಶ್ರೀ ಮೈಲಾರಲಿಂಗೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಅಲ್ಲಿಂದ ಸಮೀಪದ ಗಾಳೀಹಳ್ಳಿ ಬಳಿಯ ಪಾದಕೆರೆಯಲ್ಲಿರುವ ಸ್ವಾಮಿಯ ಪಾದಗಳ ಬಳಿ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸೇವಾಗಣಗಳ ಗೊರವಪ್ಪರೊಂದಿಗೆ 101 ದೋಣಿ ಸೇವೆ ಹಾಗೂ ಎಡೆ ಸಲ್ಲಿಸಲಾಯಿತು. ನಂತರ ಬನ್ನಿ ಮುಡಿದು ಮೆರವಣಿಗೆಯ ಮೂಲಕ ಬುಧವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಮಹಾನವಮಿ ಬಯಲಿಗೆ ಉತ್ಸವ ಮೂರ್ತಿಯನ್ನು ಕರೆತರಲಾಯಿತು.

ಶ್ರೀ ಮೈಲಾರಲಿಂಗೇಶ್ವರಸ್ವಾಮಿಯ ಅರ್ಚಕ ದಶರಥ ಪೂಜಾರರು ಉತ್ಸವ ಸ್ಥಳಕ್ಕೆ ಆಗಮಿಸಿ ಬಾಳೆಮರದ ಅಂಬು ಹಾಗೂ ದೇವರಿಗೆ 3 ಬಾರಿ ಪ್ರದಕ್ಷಿಣೆ ಹಾಕಿದರು. ಬಳಿಕ ಬೆಣ್ಣೆ ಮೆತ್ತಿ ಹಳದಿ ಸೇವಂತಿಗೆ ಪುಷ್ಪಗಳಿಂದ ಅಲಂಕರಿಸಿದ್ದ ದೊಡ್ಡಬಿಲ್ಲಯ್ಯನನ್ನು ಏರಿದರು. ದೊಡ್ಡಬಿಲ್ಲಯ್ಯನ ಮೇಲೆ ನಿಂತು ತಮ್ಮ ಕೈಯಲ್ಲಿದ್ದ ಗಂಟೆಯನ್ನು 3 ಬಾರಿ ಬಾರಿಸುತ್ತಿದ್ದಂತೆ ಸುತ್ತಮುತ್ತ ನೆರೆದಿದ್ದ ಭಕ್ತರಲ್ಲಿ ಮೌನ ಆವರಿಸಿತು. ನಂತರ ಅರ್ಚಕ ದಶರಥ ಪೂಜಾರರು ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕ ವಾಣಿಯನ್ನು ನುಡಿದರು. ಕಾರ್ಣಿಕ ವಾಣಿ ಮುಗಿಯುತ್ತಿದ್ದಂತೆ ನೆರೆದಿದ್ದ ಗೊರವಯ್ಯರು ಗಂಟೆ ಮತ್ತು ಡಮರುಗಳನ್ನು ಬಾರಿಸಿದರು.

ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕ ಅರ್ಥ

ಈ ಬಾರಿಯ ಕಾರ್ಣಿಕ ವಾಣಿಯಲ್ಲಿ ನಾಡಿನ ಸಮೃದ್ಧಿಯೊಂದಿಗೆ ಸಂಘರ್ಷ ಹಾಗೂ ಎಚ್ಚರಿಕೆಯ ಸಂದೇಶವೂ ಅಡಕವಾಗಿದೆ ಎಂದು ಅರ್ಚಕರು ವಿವರಿಸಿದ್ದಾರೆ. ಸೃಷ್ಟಿಗೆ ನಾಡು ಸಿರಿಯಾಯಿತು ಎಂಬ ನುಡಿಯು ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯಾಗುವ ಶುಭಸೂಚನೆಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಮದಗಜಗಳು ಕಾದಾಡಿದರು ಎಂಬ ನುಡಿಯು ಪ್ರಭಾವಿ ವ್ಯಕ್ತಿಗಳು ಅಥವಾ ಬಲಿಷ್ಠ ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆಯ ಸಂಕೇತವಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಕತ್ತಲೆಯ ದೀಪಕ್ಕೆ ಬೆಳಕಾಯಿತು ಎಂಬ ನುಡಿಯು ಕಷ್ಟ, ಅಜ್ಞಾನ ಹಾಗೂ ಅನ್ಯಾಯದ ನಡುವೆ ಜ್ಞಾನ, ಸತ್ಯ ಮತ್ತು ನ್ಯಾಯದ ಬೆಳಕು ಮೂಡುವ ಸಂಕೇತವಾಗಿದೆ ಎಂದು ವಿವರಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor