ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವದ ಇತಿಹಾಸದಲ್ಲಿ ನಿನ್ನೆ ದಿನ ನಡೆದ ಘಟನೆ ಹಲವು ಪ್ರಶ್ನೆಗಳು ನಿಗೂಢತೆಗಳನ್ನ ಅನುಮಾನಗಳನ್ನ ತರ್ಕಗಳನ್ನ ಹುಟ್ಟುಹಾಕಿದೆ. ನಿನ್ನೆ ಬುಧವಾರ ಸಂಭ್ರಮದಿಂದಲೇ ಆರಂಭಗೊಂಡ ಜಂಬೂಸವಾರಿ ಕೆಲವೇ ನಿಮಿಷಗಳಲ್ಲಿ ಆತಂಕದ ಸನ್ನಿವೇಶಕ್ಕೆ ಕಾರಣವಾಗಿದ್ದೇಗೆ? ಇದನ್ನೆ ಗಮನಿಸುತ್ತಾ ಹೋಗೋಣ ಬನ್ನಿ..
ನಾಡದೇವತೆ ಚಾಮುಂಡೇಶ್ವರಿಯನ್ನು ಬೆಳ್ಳಿ ಅಂಬಾರಿಯಲ್ಲಿ ಹೊತ್ತು ಸಾಗಬೇಕಿದ್ದ ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ (36), ಮೆರವಣಿಗೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಹೈಡ್ರಾಮವನ್ನೆ ಸೃಷ್ಟಿಸಿದ್ದ. ಪರಿಣಾಮ 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿ ಪೀಸ್ ಪೀಸ್ ಆಗಿದೆ. ಎರಡು ಕಾರು, ಮೂರು ಬೈಕ್ ಜಖಂಗೊಂಡಿವೆ. ಯಾರೊಬ್ಬರ ಮೇಲೂ ದಾಳಿ ಆಗದೆ ಇರಲು ಕಾರಣ ಸೋಮಣ್ಣ ಆನೆ ತೋರಿದ ದಯೆಯಷ್ಟೆ!
ಈ ಘಟನೆಯ ಹಿಂದೆ ನಡೆದಿದ್ದೇನು? ಪ್ರತಿವರ್ಷ ಅಂಬಾರಿ ಹೊರುತ್ತಿದ್ದ ಸಾಗರ್ ಆನೆಯ ಬದಲಾಗಿ ಈ ಬಾರಿ ಸೋಮಣ್ಣನಿಗೆ ಜವಾಬ್ದಾರಿ ನೀಡಿದ್ದೇಕೆ? ತಾಲೀಮಿನ ಸಂದರ್ಭದಲ್ಲಿ ಅನುಸರಿಸಿದ್ದ ಆನೆಗಳ ಸರತಿಯನ್ನು ಜಂಬೂಸವಾರಿ ನಡೆಯುತ್ತಿದ್ದಾಗ ಬದಲಾಯಿಸಿದ್ದು ಯಾರು? ಮೆರವಣಿಗೆಯ ಆರಂಭದಲ್ಲಿಯೇ ಆತಂಕದ ಲಕ್ಷಣ ತೋರಿಸಿದ್ದ ಸೋಮಣ್ಣನನ್ನೆ ಜಂಬೂ ಸವಾರಿಯಲ್ಲಿ ಮುಂದುವರಿಸುವ ರಿಸ್ಕ್ ತೋರಿದ್ದೇಕೆ? ಇವೆ ಪ್ರಶ್ನೆಗಳು ಸದ್ಯ ಮತ್ತೆ ಮತ್ತೆ ಕೇಳಿ ಬರುತ್ತಿವೆ!
ಶಿವಮೊಗ್ಗ ದಸರಾ ಜಂಬೂಸವಾರಿಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳನ್ನು ಅಕ್ಟೋಬರ್ 15ರಂದು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಅಕ್ಟೋಬರ್ 16ರಿಂದ ಮೂರೂ ಆನೆಗಳಿಗೆ ಮೆರವಣಿಗೆಯ ತಾಲೀಮು ಆರಂಭಿಸಲಾಗಿತ್ತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ತಾಲೀಮು ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಆನೆಗಳ ಸಂಚಾರಕ್ಕೆ ನಿರ್ದಿಷ್ಟ ಸರತಿಯನ್ನು ಅನುಸರಿಸಲಾಗುತ್ತಿತ್ತು. ಮಲೆನಾಡು ಟುಡೆಗೆ ಹೆಸರು ಹೇಳಲು ಇಚ್ಚಿಸಿದ ಸಿಬ್ಬಂದಿಯೊಬ್ಬರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಪ್ರತಿದಿನದ ತಾಲೀಮಿನಲ್ಲಿ ಪ್ರತಿಸಲದಂತೆ ಸಾಗರ್ ಆನೆಯೇ ಮುಂದಾಳತ್ವ ವಹಿಸಿತ್ತು. ಆನಂತರ ಈ ಸರತಿ ಏಕೆ ಬದಲಾಯಿತು ಎಂಬುದು ಸಿಬ್ಬಂದಿಗೂ ಅಸ್ಪಷ್ಟವಾಗಿತ್ತಂತೆ.
ಪ್ರತಿವರ್ಷದಂತೆ ಸಾಗರ ಆನೆಗೆ ಅಂಬಾರಿ ಜವಾಬ್ದಾರಿ ನೀಡುವ ಬದಲು ದಸರಾಕ್ಕೆ ಹೊಸಬನಾದ ಸೋಮಣ್ಣನಿಗೆ ಏಕೆ ಅಂಬಾರಿ ಹೊರಿಸಲಾಯಿತು? ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಸಾಗರ್ನಿಗೆ ಕಾಲು ನೋವಾಗಿತ್ತು. ಅದು ತನ್ನ ಕಾಲನ್ನ ಎತ್ತಿ ಎತ್ತಿ ತನ್ನ ನೋವನ್ನ ವ್ಯಕ್ತಪಡಿಸ್ತಿತ್ತು. ಹೀಗಾಗಿ ಅದರ ಬದಲಿಗೆ ಸೋಮಣ್ಣನನ್ನ ಆಯ್ಕೆ ಮಾಡಲಾಯ್ತು ಎನ್ನುತ್ತಿದೆ. ಕಡೆಕ್ಷಣದಲ್ಲಿ ಈ ತೀರ್ಮಾನಕ್ಕೆ ಬಂದಿದ್ದೆ ಇಷ್ಟೆಲ್ಲಾ ಅನಾಹುತಕ್ಕ ಕಾರಣವಾಯಿತೆ?
ಇನ್ನೂ ನಡೆದ ಘಟನೆಯನ್ನು ಟೈಮಿಂಗ್ಸ್ ಪ್ರಕಾರ ನೋಡುವುದಾದರೆ, ನಿನ್ನೆ ಮಧ್ಯಾಹ್ನ 2.45ರ ಸುಮಾರಿಗೆ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳನ್ನು ಜಿಲ್ಲಾ ತರಬೇತಿ ಸಂಸ್ಥೆಯ ಆವರಣದಿಂದ ಕರೆತಂದು ಶಿವಪ್ಪನಾಯಕ ಅರಮನೆಯ ಮುಂಭಾಗಕ್ಕೆ ತರಲಾಯಿತು. ಆನಂತರ ಕ್ರೇನ್ ಬಳಸಿ ನಾಡದೇವತೆ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಇರುವ 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯನ್ನು ಸೋಮಣ್ಣ ಆನೆಯ ಮೇಲೆ ಹೊರಿಸಲಾಯಿತು. ಸಾಗರ್ ಆನೆಯನ್ನ ಮುಂದಕ್ಕೆ ಬಿಡಲಾಗಿತ್ತು..
ಈ ಮಧ್ಯೆ ಅರಣ್ಯ ಇಲಾಖೆ ಮುಂದೆ ಹೋಗುತ್ತಿದ್ದ ಸಾಗರ್ ಆನೆಯನ್ನ ಹಿಂದಕ್ಕೆ ತರಿಸಿ, ಅಂಬಾರಿ ಹೊತ್ತಿದ್ದ ಸೋಮಣ್ಣನನ್ನ ಮುಂದಕ್ಕೆ ಬಿಟ್ಟರು. ಇದಾದ ಕೆಲವೇ ಕ್ಷಣಗಳಲ್ಲಿ ಜನಗದ್ದಲ ನೋಡಿ ಬೆದರಿದ ಸೋಮಣ್ಣ ಎಕ್ದಂ ಹೋಗಬೇಕಿದ್ದ ದಾರಿಗೆ ತಿರುಗಿ ನಿಂತು ಒಂದೆ ಸಮನೆ ಓಡಲು ಆರಂಭಿಸಿದ್ದಾನೆ. ಸೋಮಣ್ಣ ತನ್ನನ್ನ ಕಟ್ಟಿದ್ದ ಸ್ಥಳಕ್ಕೆ ಹೋಗಲು ಯತ್ನಿಸಿದನಾದರೂ, ಆತನಿಗೆ ದಾರಿ ಗೊತ್ತಾಗದೇ ಸಣ್ಣ ಸಣ್ಣ ಗಲ್ಲಿಗಳಿಗೆ ನುಗ್ಗಲು ಆರಂಭಿಸಿದೆ. ಪೋಸ್ಟ್ ಆಫೀಸ್ ಬಳಿಯೇ ಇರುವ ಕ್ರಾಸ್ ವೊಂದಕ್ಕೆ ನುಗ್ಗಿದ ಸೋಮಣ್ಣ ಅಲ್ಲಿಂದ ಇನ್ನಷ್ಟು ಅಗ್ರೆಸಿವ್ ಆದ, ಆಬಳಿಕ ಅಂಬಾರಿಯನ್ನ ಬೀಳಿಸಲು ಯತ್ನಿಸಿ, ಕಾರೊಂದರ ಮೇಲೆ ಅಂಬಾರಿಯನ್ನ ಉರುಳಿಸಿ ಡ್ಯಾಮೇಜ್ ಮಾಡಿದ, ಅಂಬಾರಿಯಿಂದಲೇ ಕಾರನ್ನ ಎತ್ತಿ ಹಾಕಲು ಮುಂದಾದ. ಬಳಿಕ ಅಲ್ಲಿಯೇ ಎದುರಲ್ಲಿದ್ದ ಗಲ್ಲಿಗೆ ನುಗ್ಗಿ ಇನ್ನೊಂದು ಕಾರನ್ನ ಅಂಬಾರಿಯಿಂದ ಡ್ಯಾಮೇಜ್ ಮಾಡಿದ.
ಇಷ್ಟೊತ್ತಿಗೆ ಅನಾಹುತ ಅರಿತ ಇಲಾಖೆ ವೈದ್ಯರು ಆನೆಗೆ ಡಾರ್ಟ್ ಮಾಡಿದರು, ಪರಿಣಾಮ ಸೋಮಣ್ಣ ಘೀಳಿಟ್ಟು ನಿಂತಲ್ಲಿಯೇ ನಿಂತ. ಇಲ್ಲಿವರೆಗೂ ಸೋಮಣ್ಣನನ್ನು ಸಮಧಾನಕ್ಕೆ ಯತ್ನಿಸಿದ್ದ ಬಹದ್ದೂರ್ ಸೋಮಣ್ಣನನ್ನ ವಾಸವಿ ಶಾಲೆ ಪಕ್ಕದ ರಸ್ತೆಯಲ್ಲಿ ಕಾರ್ನರ್ ಮಾಡಿ ನಿಲ್ಲಿಸಿದ, ತಕ್ಷಣ ಆನೆ ಮಾವುತ ಸಿಬ್ಬಂದಿ ಸೇರಿಕೊಂಡು ಅಂಬಾರಿಯಲ್ಲಿದ್ದ ಉತ್ಸವ ಮೂರ್ತಿಯನ್ನು ಇಳಿಸಿದರು, ಅಂಬಾರಿಯನ್ನ ಇಳಿಸಿದರು, ಚೈನ್ ಕಟ್ಟಿ ಸೋಮಣ್ಣನನ್ನು ಡಯಟ್ ಕೇಂದ್ರದ ಆವರಣದಲ್ಲಿ ಆನೆಗಳಿಗಾಗಿ ನಿರ್ಮಿಸಲಾಗಿದ್ದ ಟೆಂಟ್ ಬಳಿಗೆ ಕರೆದೊಯ್ದರು. ಅಲ್ಲಿ ಸೋಮಣ್ಣ ಬಹುತೇಕ ಶಾಂತನಾದ.
ಸೋಮಣ್ಣನನ್ನು ಶಾಂತಗೊಳಿಸಲು ಮಾವುತ ಸಾಕಷ್ಟು ಪ್ರಯತ್ನ ಪಟ್ಟನಾದರೂ ಆತನೂ ಸಹ ಗಾಯಗೊಂಡು ವಿಫಲನಾದ. ಇನ್ನೂ ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇದೊಂದು ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿ ನಡೆದ ಘಟನೆ, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಏನಾಗಿಲ್ಲ! ಬೇರೊಂದು ಉತ್ಸವಮೂರ್ತಿಯನ್ನ ಬನ್ನಿ ಮಂಟಪಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ದಸರಾ ಉತ್ಸವ ಮುಂದುವರಿದಿದೆ ಎಂದು ತಿಳಿಸಿದರು. ಅಲ್ಲದ ಘಟನೆಗೆ ಕಾರಣಗಳನ್ನ ಹುಡುಕಲಾಗುತ್ತಿದೆ. ಈ ತಕ್ಷಣಕ್ಕೆ ಯಾರಿಗೂ ಯಾವುದೆ ಅಪಾಯವಾಗಿಲ್ಲ ಎಂಬುದು ಸಮಾಧಾನದ ಸಂಗತಿ ಎಂದರು.
ಇನ್ನೂ ಈ ಬಗ್ಗೆ ಮಾತನಾಡಿದ ಸಿಸಿಎಫ್, ಸೋಮಣ್ಣ ಆನೆ ಗಾಬರಿಗೊಂಡಿದ್ದರಿಂದ ಇಷ್ಟೆಲ್ಲಾ ಆಯಿತು, ಅದು ಗಾಬರಿಗೊಂಡು ತನ್ನನ್ನು ಕಟ್ಟಿದ ಸ್ಥಾನಕ್ಕೆ ವಾಪಸ್ ಬರಲು ಪ್ರಯತ್ನಿಸಿದೆ. ಆನೆ ಯಾರೊಬ್ಬರ ಮೇಲೂ ದಾಳಿ ಮಾಡಿಲ್ಲ, ಗಾಬರಿಯಲ್ಲಿ ಕೆಲವೊಂದು ವಾಹನಗಳಿಗೆ ಡ್ಯಾಮೆಜ್ ಮಾಡಿದೆ. ಕಡೆಕ್ಷಣಗಳ ಬದಲಾವಣೆಗಳು ಇದಕ್ಕೆ ಕಾರಣವಲ್ಲ, ಸದ್ಯಕ್ಕೆ ಆನೆಯನ್ನು ಅದರ ಮೂಲ ಸ್ಥಾನಗಳಿಗೆ ಸುರಕ್ಷಿತವಾಗಿ ಕೊಂಡೊಯ್ಯುವ ಬಗ್ಗೆ ಯೋಚಿಸಲಾಗುತ್ತಿದೆ. ಉಳಿದಂತೆ ಬಾಕಿ ಸಂಗತಿಗಳು ವಿಚಾರಣೆಯಲ್ಲಿವೆ ಎಂದರು.
ಪ್ರಾಥಮಿಕ ಹಂತದಲ್ಲಿ ಸೋಮಣ್ಣನ ಭಯ ಪಟ್ಟಿದ್ದೆ ನಡೆದಿದ್ದಕ್ಕೆಲ್ಲಾ ಕಾರಣ ಎಂದು ತೋರುತ್ತಿದೆಯಾದರೂ, ಸಾಗರ್ ಬದಲಾಗಿ, ಸೋಮ್ಣಣನ ಹೆಗಲಿಗೆ ಅಂಬಾರಿ ಹೊರಿಸಿದ್ದು, ದಾರಿ ತೋರಿಸುತ್ತಿದ್ದ ಸಾಗರ್ ಆನೆಯನ್ನು ಹಿಂದಕ್ಕೆ ಕಳಿಸಿ ಸೋಮಣ್ಣನನ್ನ ಮುಂದಕ್ಕೆ ಬಿಟ್ಟಿದ್ದು ಸಹ ಘಟನೆಯ ಪೂರಕ ರೀಸನ್ ಗಳು ಎಂದೇ ಆರೋಪಿಸಲಾಗುತ್ತಿದೆ. ಇಷ್ಟೆಲ್ಲಾ ನಡೆದರೂ ಸಾಗರ್ ಆನೆ ಜನರ ನಡುವೆಯೇ ನಡೆದುಕೊಂಡು ಮುಂದಕ್ಕೆ ಸಾಗಿತ್ತು. ಆನಂತರ ಪರಿಸ್ಥಿತಿಯ ಕಾರಣಕ್ಕೆ ಅದನ್ನ ವಾಪಸ್ ತರಲಾಗಿತ್ತು. ಇದು ಸಾಗರನನ್ನು ಬಿಟ್ಟು ಬೇರೆ ಆಯ್ಕೆ ಮಾಡಿದ್ದು ಘಟನೆಗೆ ಕಾರಣ ಎಂಬದನ್ನ ಸಾಕ್ಷಿಕರಿಸ್ತಿದೆ…
ಇನ್ನೂ ಸ್ಥಳೀಯರ ಮಾಹಿತಿ ಪ್ರಕಾರ, ಸೋಮಣ್ಣ ಆರಂಭದಲ್ಲಿಯೆ ಮುಂದಿನ ಕ್ಷಣಗಳ ಸಿಗ್ನಲ್ ಕೊಟ್ಟಿದ್ದನಂತೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಂಸಾಳೆ ಮತ್ತು ಡೊಳ್ಳಿನ ಶಬ್ದ ಕೇಳಿಬಂದಾಗ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ದಿಕ್ಕು ಬದಲಿಸಿ ನಿಂತಿತ್ತು . ಈ ವೇಳೆಯಲ್ಲಿಯೇ ನಿರ್ಧಾರ ಕೈಗೊಂಡಿದ್ದರೆ, ಅದ್ವಾನ ನಡೆಯುತ್ತಿರಲಿಲ್ಲ. ಆದರೆ, ಆನೆಯನ್ನು ಸಮಾಧಾನಪಡಿಸಿ ಮೆರವಣಿಗೆಯಲ್ಲಿ ಮುಂದುವರಿಸಲಾಯಿತು.
ಇನ್ನೂ ಟೈಮ್ಲೈನ್ ಪ್ರಕಾರ, ನೋಡುವುದಾದರೆ, ಸಮಯ ಮಧ್ಯಾಹ್ನ 3.50 ಹೊತ್ತಿಗೆ ಜೈನ್ ಸಭಾ ಭವನದ ಬಳಿ ಸೋಮಣ್ಣ ಹೆದರಿ ವಾಪಸ್ ತನ್ನನ್ನು ಕಟ್ಟಿದ್ದ ಜಾಗಕ್ಕೆ ಓಡಲು ಆರಂಭಿಸಿದ. ಅವನೊಟ್ಟಿಗೆ ಬಹದ್ದೂರ್ ಸಹ ಹಿಂದೆ ಓಡಿಬಂದ, ಎರಡನ್ನು ಸಮಧಾನ ಮಾಡಲು ಮಾವುತರು ಸಿಬ್ಬಂದಿ ಹರಸಾಹಸ ಪಟ್ರು. ಬಹದ್ದೂರ್ ದಾರಿಮಧ್ಯೆ ನಿಂತೂ ಸಮಧಾನಗೊಂಡರೂ, ಸೋಮಣ್ಣನಿಗೆ ಭಯ ಹೆಚ್ಚಾಯಿತು, ಹೀಗಾಗಿ ದಿಕ್ಕಾಪಾಲಾಗಿ ಓಡಲು ಆರಂಭಿಸಿದ. ಮಧ್ಯಾಹ್ನ 3.55ಕ್ಕೆ ವಾಸವಿ ಶಾಲೆ ಬಳಿ ಇದ್ದ ಖಾಲಿ ಜಾಗಕ್ಕೆ ನುಗ್ಗಿದ ಸೋಮಣ್ಣ ಅಲ್ಲಿಂದ ಮನೆಯೊಂದರ ಆವರಣಕ್ಕೆ ನುಗ್ಗಿ, ಪುನಃ ಕೋಟೆ ಪೊಲೀಸ್ ಸ್ಟೇಷನ್ ರೋಡಿಗೆ ಬಂದ, ಅಲ್ಲಿ ಪೋಸ್ಟ್ ಆಫೀಸ್ ಬಳಿಯಲ್ಲಿ ಅತ್ತಿಂದಿತ್ತ ಹೋಗಿ, ಅಂಬಾರಿಯನ್ನ ಕೆಡವಲು ಯತ್ನಿಸಿದ. ಅಷ್ಟೊತ್ತಿಗೆ ಸುಮಾರು 4.15 ಆಗಿತ್ತು. ಈ ವೇಳೆ ಪಶುವೈದ್ಯರಾದ ಆನಂದ್ ಮತ್ತು ಮುರಳಿಮನೋಹರ್ ಅವರ ತಂಡ ಅರಿವಳಿಕೆ ಚುಚ್ಚುಮದ್ದಿನ ಮೂಲಕ ಆನೆಯನ್ನು ಶಾಂತಗೊಳಿಸಿದರು. ಬಳಿಕ ಸೋಮಣ್ಣನನ್ನ ಚೈನ್ ಬಿಗಿದು, ಬಹದ್ದೂರ್ ನ ಸಹಾಯದೊಂದಿಗೆ ಡಯಟ್ ಕೇಂದ್ರಕ್ಕೆ ಸಾಗಿಸಲಾಯಿತು. ಸಂಜೆ 5 ಗಂಟೆಯ ಸುಮಾರಿಗೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಸೋಮಣ್ಣನನ್ನು ಹೊರಗೆ ಕರೆತರಲಾಯಿತು. ಅಷ್ಟೊತ್ತಿಗೆ ಸಂಜೆ ಐದಾಗಿತ್ತು.
ಜನರಿಗೆ ಅಪಾಯವಾಗದಂತೆ ಕ್ರಮ ಕೈಗೊಂಡಿದ್ದೇವೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
ಮೆರವಣಿಗೆಯ ಮಾರ್ಗಮಧ್ಯೆ ಆನೆಗಳು ಬೆದರಿ ಓಡಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದರು. ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆನೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು ಯಾವುದೇ ಹೆಚ್ಚಿನ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,
ಸೋಮಣ್ಣ ಆನೆ ಗಾಬರಿಗೊಂಡಿದ್ದರಿಂದ ಘಟನೆ ಸಂಭವಿಸಿದೆ . ಆನೆ ಗಾಬರಿಯಾದ ನಂತರ ತನ್ನನ್ನು ಕಟ್ಟಿದ್ದ ಸ್ಥಳಕ್ಕೆ ಹಿಂದಿರುಗಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ. ಆದರೆ ಆನೆ ಯಾರ ಮೇಲೂ ದಾಳಿ ನಡೆಸಿಲ್ಲ .
ಹನುಮಂತಪ್ಪ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್),
