ಸುದ್ದಿಯ ಸ್ಥಳ: Shivamogga district, Karnataka
ಶಿವಮೊಗ್ಗ ಏರ್ಪೋರ್ಟ್ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿ ಮೂರು ವರ್ಷ ಕೂಡ ಕಳೆದಿಲ್ಲ. ಆಗಲೇ ಏರ್ಪೋರ್ಟ್ಗೆ ಕೊನೆಯ ಮೊಳೆ ಹೊಡೆಯುವ ಕ್ಷಣ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ಆಡಿದ ಮಾತುಗಳು ಇನ್ನೂ ಹಸಿರಾಗಿಯೇ ಇವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೊಂಡಾಡಿದ್ದರು. ಆದರೆ ವಿಮಾನ ನಿಲ್ದಾಣಕ್ಕೆ ಈಗ ಬಂದಿರುವ ದುಸ್ಥಿತಿ ಗಮನಿಸಿದಾಗ ವ್ಯವಸ್ಥೆಗೆ ಹೊಣೆ ಯಾರು ಎಂಬ ಪ್ರಶ್ನೆ ಮೂಡತೊಡಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಹಾಡಿಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ
ಅದು ಹದಿನಾಲ್ಕು ವರ್ಷಗಳ ಶಿವಮೊಗ್ಗ ಜನತೆಯ ಕನಸು 27-02-2023 ರಂದು ನನಸಾದ ಸಾರ್ಥಕ ಕ್ಷಣ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಂದು ಲೋಕಾರ್ಪಣೆಗೊಳಿಸಿದರು. ಬೆಳಿಗ್ಗೆ 11.30ಕ್ಕೆ ದೆಹಲಿಯಿಂದ ಶಿವಮೊಗ್ಗಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಪ್ರಧಾನಿಯವರನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ವಾಗತ ಕೋರಿದರು. ನಂತರ ಮೋದಿಯವರು ನೂತನ ಏರ್ಪೋರ್ಟ್ ಟರ್ಮಿನಲ್ ವೀಕ್ಷಣೆ ಮಾಡಿದ್ದು, ನಂತರ ವೇದಿಕೆಗೆ ಆಗಮಿಸಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ್ದರು.
ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು, ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ ಎಂದ ಮೋದಿಯವರು ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಭಾಷಣ ಆರಂಭಿಸಿದ್ದರು. ಒಂದು ಭಾರತ ಶ್ರೇಷ್ಠ ಭಾರತ ಎಂದು ಸಾರಿ ಹೇಳಿದ ರಾಷ್ಟ್ರಕವಿ ಕುವೆಂಪು ನೆಲಕ್ಕೆ ನಮನಿಸುವುದಾಗಿ ಹೇಳಿದರು. ಈ ದಿನ ಕರ್ನಾಟಕಕ್ಕೆ ಬಂದು ವಿಮಾನ ನಿಲ್ದಾಣ ಮತ್ತು ಸಾವಿರಾರು ಕೋಟಿ ರೂಪಾಯಿಯ ಬೃಹತ್ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವ ಸೌಭಾಗ್ಯ ದೊರೆತಿದೆ. ಈ ದಿನ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಲಭ್ಯವಾಗಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ವಿಮಾನ ನಿಲ್ದಾಣದ ಕನಸು ಈ ದಿನ ನನಸಾಗಿದೆ.
ಶಿವಮೊಗ್ಗ ಏರ್ಪೋರ್ಟ್ ಸುಂದರವಾಗಿದೆ. ಇದು ಸಾಂಪ್ರದಾಯಿಕ ಮತ್ತು ತಂತ್ರಜ್ಞಾನದ ಸಂಗಮವಾಗಿದೆ. ರಸ್ತೆಯಿಂದ ಹಿಡಿದು ರೈಲಿನವರೆಗೆ ಅನೇಕ ಕಾಮಗಾರಿಗಳು ಇಂದು ಶಿಲಾನ್ಯಾಸಗೊಂಡಿವೆ. ಪ್ರತಿ ಮನೆಯಲ್ಲೂ ಜಲಭಾಗ್ಯ ಲಭಿಸುವ ಕಾಮಗಾರಿ ಪ್ರಾರಂಭವಾಗಿದೆ. ಈ ದಿನ ತುಂಬಾ ವಿಶೇಷವಾಗಿದೆ, ಇದು ಜನಪ್ರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟಿದ ದಿನ. ನಾನು ಅವರಿಗೆ ಆಭಾರಿಯಾಗಿದ್ದೇನೆ.
ಹೋರಾಟದ ಬದುಕಿನ ಮೂಲಕ ಬಡವರು, ರೈತರ ಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿದ್ದಾರೆ. ಯಡಿಯೂರಪ್ಪ ಅವರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. ನಾವು ನೀವೆಲ್ಲರೂ ಮೊಬೈಲ್ ಲೈಟ್ ಟಾರ್ಚ್ ಹಾಕುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸೋಣ ಎಂದು ಮೋದಿಯವರು ಕರೆ ನೀಡಿದರು. ನೆರೆದ ಜನತೆ ಟಾರ್ಚ್ ಆನ್ ಮಾಡಿ ಬಿ.ಎಸ್.ವೈ.ಗೆ ಅಭಿನಂದನೆ ಸಲ್ಲಿಸಿದರು. ನಂತರ ಪ್ರಧಾನಿಯವರು ದೇಶದ ಅಭಿವೃದ್ಧಿಯ ಬಗ್ಗೆ ಜನತೆಯ ಗಮನ ಸೆಳೆದರು.
ಹೌದು, ಪ್ರಧಾನಿ ನರೇಂದ್ರ ಮೋದಿಯವರು ಅಂದು ಆಡಿದ ಮಾತುಗಳಲ್ಲಿ ಗಟ್ಟಿತನವಿತ್ತು. ಶಿವಮೊಗ್ಗ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಮೂರು ವರ್ಷ ಕಳೆಯುವ ಮುನ್ನವೇ ಅಭಿವೃದ್ಧಿ ಎಂಬುದು ಕಳೆಗುಂದಿದೆ. ಹೌದು, ಉಡಾನ್ ಯೋಜನೆಯಡಿ ವಿಮಾನ ಸೇವೆಗಳನ್ನು ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನವಾಗಿ ವೆಚ್ಚ ಭರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಗಣಿಸದ ಪರಿಣಾಮ ದೇಶದ 17 ವಿಮಾನ ನಿಲ್ದಾಣಗಳಲ್ಲಿ ಸೇವೆ ಸ್ಥಗಿತಗೊಂಡಿದೆ. ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನವೆಂಬರ್ 21ರಿಂದ ವಿಮಾನ ಸಂಚಾರ ಸ್ಥಗಿತಗೊಳ್ಳಲಿದೆ.
ವಿಮಾನ ಸೇವೆ ಸ್ಥಗಿತಗೊಳ್ಳಲು ಮುಖ್ಯ ಕಾರಣ:
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ‘ಉಡಾನ್’ (UDAN-2) ಅಡಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ನೀಡುತ್ತಿದ್ದ ಸಬ್ಸಿಡಿ ಹಾಗೂ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಅವಧಿ ಮುಕ್ತಾಯಗೊಂಡಿರುವುದು.
ಸಬ್ಸಿಡಿ ಹಾಗೂ ನಿರ್ದಿಷ್ಟ ಆರ್ಥಿಕ ಬೆಂಬಲವಿಲ್ಲದೆ ಸಣ್ಣ ವಿಮಾನಗಳನ್ನು ನಡೆಸುವುದು ಕಷ್ಟವಾಗುವುದರಿಂದ, ಈಗಾಗಲೇ ಕೆಲವು ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿದ್ದು, ಕೊನೆಯದಾಗಿ ಕಾರ್ಯಾಚರಣೆ ನಡೆಸುತ್ತಿದ್ದ ‘ಸ್ಟಾರ್ ಏರ್’ (Star Air) ಸಂಸ್ಥೆಯ ಒಪ್ಪಂದ ಹಾಗೂ ಸಬ್ಸಿಡಿ ಅವಧಿ ನವೆಂಬರ್ 20, 2026ಕ್ಕೆ ಕೊನೆಗೊಳ್ಳಲಿದೆ. ಇದರೊಂದಿಗೆ ನವೆಂಬರ್ 21ರಿಂದ ನಿಯಮಿತ ವಿಮಾನ ಹಾರಾಟಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಕೆಎಸ್ಐಐಡಿಸಿ (KSIIDC) ಅಧ್ಯಕ್ಷರ ಹೇಳಿಕೆ ಪ್ರಕಾರ, ವಿಮಾನ ನಿಲ್ದಾಣವು ಶಾಶ್ವತವಾಗಿ ಮುಚ್ಚುವುದಿಲ್ಲ. ಆದರೆ ಹೊಸ ಮಾರ್ಗಗಳು ಹಾಗೂ ಉಡಾನ್ ಯೋಜನೆಯ ಮುಂದಿನ ಹಂತದಡಿ (UDAN-6 ಅಥವಾ ಹೊಸ ಟೆಂಡರ್ ಪ್ರಕ್ರಿಯೆ) ವಿಮಾನ ಸೇವೆಗಳು ಪುನರಾರಂಭಗೊಳ್ಳಲು ಅಂದಾಜು ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ರಾಜಕೀಯ ಚರ್ಚೆ ಮತ್ತು ವಲಯದ ಬೆಳವಣಿಗೆ:
ವಿಮಾನ ಸೇವೆಗಳ ಸ್ಥಗಿತದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮುನ್ನೆಲೆಗೆ ಬಂದಿವೆ. ಕೇಂದ್ರದ ಉಡಾನ್ ಯೋಜನೆಯ ವೈಫಲ್ಯವೇ ಇದಕ್ಕೆ ಕಾರಣ ಎಂದು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದರೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ನೀತಿಗಳೇ ಕಾರಣ ಎಂದು ಸ್ಥಳೀಯ ಸಂಸದ ವಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ರಾತ್ರಿ ವೇಳೆ ವಿಮಾನ ಇಳಿಯಲು ಅನುಕೂಲವಾಗುವ ‘ನೈಟ್ ಲ್ಯಾಂಡಿಂಗ್’ (Night Landing) ಕಾಮಗಾರಿಗಳು ಶೇ. 95ರಷ್ಟು ಪೂರ್ಣಗೊಂಡಿದ್ದು, ಡಿಜಿಸಿಎ (DGCA) ಪರಿಶೀಲನೆ ಹಾಗೂ ಪ್ರಮಾಣೀಕರಣದ ಬಳಿಕ ರಾತ್ರಿ ವೇಳೆಯೂ ವಿಮಾನ ಸಂಚಾರಕ್ಕೆ ಅನುಕೂಲವಾಗಲಿದೆ.
ಸರ್ಕಾರಗಳು ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಮಟ್ಟದಲ್ಲಿ ಹೊಸ ವಿಮಾನಯಾನ ಸಂಸ್ಥೆಗಳನ್ನು ಸೆಳೆಯಲು ಮತ್ತು ಹೊಸ ಮಾರ್ಗಗಳ ಮೂಲಕ ಸೇವೆಗಳನ್ನು ಆದಷ್ಟು ಶೀಘ್ರ ಮುಂದುವರಿಸಲು ಪ್ರಯತ್ನಗಳು ನಡೆಯುತ್ತಿವೆ.
ರಾಜಕೀಯ ಆರೋಪ-ಪ್ರತ್ಯಾರೋಪಗಳು ಏನೇ ಇರಲಿ… ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಕಾಯಕಲ್ಪವಾಗಬೇಕಿದೆ. ಪ್ರಧಾನಿಯವರ ಮಾತಿನಂತೆ ಶಿವಮೊಗ್ಗ ವಿಮಾನ ನಿಲ್ದಾಣ ಸಾಂಪ್ರದಾಯಿಕ ಮತ್ತು ತಂತ್ರಜ್ಞಾನದ ಸಂಗಮವಾಗಲಿ ಎಂಬುದು ಜನತೆಯ ಆಶಯವಾಗಿದೆ.
