ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಈ ನಡುವೆ ತುಂಗಾ ಮತ್ತು ಭದ್ರಾ ಜಲಾಶಯಗಳ ನೀರಿನ ಸಂಗ್ರಹ ಎಷ್ಟಿದೆ ಎಂದು ಗಮನಿಸುವುದಾದರೆ, ಅದಕ್ಕೆ ಉತ್ತರ ಇಲ್ಲಿದೆ. ಇಂದು ಬೆಳಗ್ಗೆ ಅಂದರೆ ನವೆಂಬರ್ 16ರ ಬೆಳಗ್ಗೆ ಎಂಟು ಗಂಟೆಯ ಬುಲೆಟಿನ್ ಪ್ರಕಾರ, ಭದ್ರಾ ಜಲಾಶಯದ ನೀರಿನ ಮಟ್ಟ 172 ಅಡಿ 2½ ಇಂಚು ಇದೆ. ಜಲಾಶಯದ ಪೂರ್ಣಮಟ್ಟ 186 ಅಡಿಯಾಗಿದ್ದು, ಒಟ್ಟು ನೀರು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದೆ.
ಪ್ರಸ್ತುತ ಜಲಾಶಯದಲ್ಲಿ 55.253 ಟಿಎಂಸಿ ನೀರು ಸಂಗ್ರಹವಿದ್ದು, ಪೂರ್ಣ ಸಾಮರ್ಥ್ಯಕ್ಕೆ ಹೋಲಿಸಿದರೆ ಸುಮಾರು ಶೇ.77.24ರಷ್ಟು ನೀರು ಲಭ್ಯವಿದೆ. ಭದ್ರಾ ಜಲಾಶಯಕ್ಕೆ ಪ್ರಸ್ತುತ 136 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಒಟ್ಟು 935 ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ 183 ಅಡಿ 6 ಇಂಚು ಇತ್ತು. ಆಗ ಜಲಾಶಯದಲ್ಲಿ 68.419 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷ ನೀರಿನ ಮಟ್ಟ 172 ಅಡಿ 2½ ಇಂಚಿಗೆ ಇಳಿದಿದ್ದು, ಸಂಗ್ರಹ 55.253 ಟಿಎಂಸಿಗೆ ತಲುಪಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 13.166 ಟಿಎಂಸಿ ನೀರು ಕಡಿಮೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಕ್ಕೆ 414 ಕ್ಯೂಸೆಕ್ ಒಳಹರಿವು ಹಾಗೂ 3,388 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಈವರ್ಷ ಒಳಹರಿವು 136 ಕ್ಯೂಸೆಕ್ ಹಾಗೂ ಹೊರಹರಿವು 935 ಕ್ಯೂಸೆಕ್ ಇದೆ.
ತುಂಗಾ ಜಲಾಶಯ ಪೂರ್ಣ ಭರ್ತಿ: 3.24 ಟಿಎಂಸಿ ನೀರು ಸಂಗ್ರಹ
ಇನ್ನೊಂದೆಡೆ ತುಂಗಾ ಜಲಾಶಯದಲ್ಲಿ ನೀರಿನ ಮಟ್ಟ 588.24 ಮೀಟರ್ ಇದ್ದು, ಇದು ಜಲಾಶಯದ ಪೂರ್ಣಮಟ್ಟಕ್ಕೆ ಸಮ. ತುಂಗಾ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯದ ಅಂದರೆ 3.24 ಟಿಎಂಸಿ ಸಂಗ್ರಹವಿದೆ. ಇದರಲ್ಲಿ 2.411 ಟಿಎಂಸಿ ಜೀವಂತ ಸಂಗ್ರಹ ಹಾಗೂ 0.829 ಟಿಎಂಸಿ ಡೆಡ್ ಸ್ಟೋರೇಜ್. ಜಲಾಶಯಕ್ಕೆ ಒಟ್ಟು 1,132 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 1,063 ಕ್ಯೂಸೆಕ್ ನೀರು ಹೊರಹೋಗುತ್ತಿದೆ.
ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ನಿರ್ಧಾರ, ಅಧಿಕೃತ ಆದೇಶದ ನಿರೀಕ್ಷೆ
ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮತ್ತು ನೀರಿನ ಕೊರತೆಯಿಂದ ಭತ್ತದ ಬೆಳೆಗಳು, ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಾ ಬಲದಂಡೆ ನಾಲೆಗೆ 10 ದಿನಗಳ ಕಾಲ ಪ್ರತಿದಿನ 1,500 ಕ್ಯೂಸೆಕ್ ಹಾಗೂ ಎಡದಂಡೆ ನಾಲೆಗೆ 10 ದಿನಗಳ ಕಾಲ ಪ್ರತಿದಿನ 500 ಕ್ಯೂಸೆಕ್ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾಹಿತಿ ನೀಡಿದ್ದರು.ಗೋಂದಿ ನಾಲೆಗೂ ನೀರು ಹರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಈ ಪ್ರಕಾರ ನಿನ್ನೆ ರಾತ್ರಿಯೇ ಡ್ಯಾಮ್ನಿಂದ ನೀರು ಹರಿಸಲಾಗಿದೆ.
