
ಮಲೆನಾಡು ಟುಡೆ ಸುದ್ದಿ / ನವದೆಹಲಿ / ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದಾಗ, ಅವರು ಯಾರು ಅಂತಾ ತಲೆಕೆರದುಕೊಳ್ಳುವುದೆ ಆಗುತ್ತೆ ಹೊರತಾಗಿ, ಯಾರು ಅಂತಾ ಗೊತ್ತಾಗಲ್ಲ. ಇನ್ಮೇಲೆ ಈ ಕಿರಿಕಿರಿ ಸ್ವಲ್ಪ ಕಡಿಮೆ ಆಗಬಹುದು. ಏಕೆಂದರೆ ನವೆಂಬರ್ 1ರಿಂದ 4G ಹಾಗೂ 5G ಮೊಬೈಲ್ ಬಳಕೆದಾರರಿಗೆ ಬರುವ ಅಪರಿಚಿತ ಕರೆಗಳಲ್ಲಿಯೂ ಕರೆ ಮಾಡಿದವರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಸಂಬಂಧ ದೂರಸಂಪರ್ಕ ಇಲಾಖೆ ಎಲ್ಲ ಟೆಲಿಕಾಂ ಸೇವಾದಾರರಿಗೆ ಹೊಸ ಸೌಲಭ್ಯ ಒದಗಿಸುವುದನ್ನು ಕಡ್ಡಾಯಗೊಳಿಸಿದೆ.
ಅಕ್ಟೋಬರ್ 13ರಂದು ದೂರಸಂಪರ್ಕ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನವೆಂಬರ್ 1ರಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ (Calling Name Presentation – CNP) ಸೌಲಭ್ಯವನ್ನು ಎಲ್ಲ ದೂರಸಂಪರ್ಕ ಸೇವಾದಾರರು ಒದಗಿಸಬೇಕಾಗಿದೆ. ಈ ವ್ಯವಸ್ಥೆಯ ಮೂಲಕ ಮೊಬೈಲ್ನಲ್ಲಿ ಸೇವ್ ಮಾಡದ ಸಂಖ್ಯೆಯಿಂದ ಕರೆ ಬಂದರೂ ಆ ಸಂಖ್ಯೆಯೊಂದಿಗೆ ಸಂಬಂಧಿಸಿದ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.



ಹೊಸ ಸಿಎನ್ಪಿ ವ್ಯವಸ್ಥೆಯಲ್ಲಿ ಮೊಬೈಲ್ನಲ್ಲಿ ಸೇವ್ ಆಗದ ಸಂಖ್ಯೆಯಿಂದ ಕರೆ ಬಂದಾಗಲೂ ಸಂಬಂಧಪಟ್ಟ ಟೆಲಿಕಾಂ ಸೇವಾದಾರರ ಬಳಿ ದಾಖಲಾಗಿರುವ ಹೆಸರನ್ನು ಮೊಬೈಲ್ ಸಂಖ್ಯೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಇದರಿಂದ ಸಂಪರ್ಕ ಪಟ್ಟಿಯಲ್ಲಿ ಇಲ್ಲದ ಸಂಖ್ಯೆಯಿಂದ ಕರೆ ಬಂದಾಗಲೂ ಆ ಸಂಖ್ಯೆ ಯಾರ ಹೆಸರಿನಲ್ಲಿ ದಾಖಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇನ್ನೂ ಹೊಸ ವ್ಯವಸ್ಥೆಯಲ್ಲಿ ಇಂಟರ್ ನ್ಯಾಷನಲ್ ಕಾಲ್ಗಳನ್ನ ಅಂತಾರಾಷ್ಟ್ರೀಯ ಕರೆ ಅಂತಲೇ ತೋರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ ಟೆಲಿಕಾಂ ಸೇವಾದಾರರ ಬಳಿ ದಾಖಲಾಗಿರುವ ಹೆಸರನ್ನು ಪ್ರದರ್ಶಿಸುವ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ಸೌಲಭ್ಯವನ್ನು ನವೆಂಬರ್ 1ರಿಂದ ಒದಗಿಸುವುದು ಕಡ್ಡಾಯವಾಗಲಿದೆ ಎಂದು ದೂರಸಂಪರ್ಕ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.


