ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ: ಪಂಚಮಸಾಲಿ ಸೇರಿದಂತೆ ಕೃಷಿ ಆಧಾರಿತ ಲಿಂಗಾಯತ ಉಪಸಮುದಾಯಗಳಿಗೆ ರಾಜ್ಯ ಸರ್ಕಾರದ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಡಿ. 10ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಉಪವಾಸ ಸತ್ಯಾಗ್ರಹ
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ, ಮಲೆಗೌಡ, ಲಿಂಗಾಯತ ಗೌಡ, ದೀಕ್ಷಾ ಹಾಗೂ ಚತುರ್ಥ ಲಿಂಗಾಯತ ಸಮುದಾಯಗಳ ಮಕ್ಕಳ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಉದ್ಯೋಗಾವಕಾಶಗಳ ದೃಷ್ಟಿಯಿಂದ ರಾಜ್ಯ ಸರ್ಕಾರ 2ಎ ಮೀಸಲಾತಿ ಕಲ್ಪಿಸಬೇಕು. ಅಲ್ಲದೆ, ಎಲ್ಲ ಲಿಂಗಾಯತ ಉಪಸಮುದಾಯಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
2024ರ ಡಿ. 10ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಮೀಸಲಾತಿಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಲಾಗಿತ್ತು. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದರು. ಈ ಘಟನೆಯ ಎರಡನೇ ವರ್ಷದ ನೆನಪಿನಲ್ಲಿ ಡಿ. 10ನ್ನು ‘ಲಿಂಗಾಯತರ ಮೇಲಿನ ಸರ್ಕಾರದ ದೌರ್ಜನ್ಯ ದಿನ’ವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ 2ಡಿ ಮೀಸಲಾತಿ ವ್ಯವಸ್ಥೆಯೂ ನ್ಯಾಯಾಲಯದ ಪ್ರಕ್ರಿಯೆಯಿಂದಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈಗಿನ ಸರ್ಕಾರಕ್ಕೆ 2ಎ ಮೀಸಲಾತಿ ಕಲ್ಪಿಸಲು ತಾಂತ್ರಿಕ ತೊಂದರೆಗಳಿದ್ದರೆ, ಕನಿಷ್ಠ 2ಡಿ ಮೀಸಲಾತಿಯನ್ನಾದರೂ ಮರುಜಾರಿಗೊಳಿಸಬೇಕು. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಉಪಸಮುದಾಯಗಳನ್ನು ಸೇರಿಸಲು ಶೀಘ್ರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಲಿಂಗಾಯತ ಪಂಚಮಸಾಲಿ ಮಹಾಸಭಾ, ಲಿಂಗಾಯತ ಪಂಚಮಸಾಲಿ ಅಡ್ವಕೇಟ್ ಪರಿಷತ್ತು, ಪಂಚಸೇನಾ, ಯುವ ಘಟಕ, ಚನ್ನಮ್ಮನ ಬಳಗ, ರೈತ ಘಟಕ, ವಿದ್ಯಾರ್ಥಿ ಪರಿಷತ್ತು ಹಾಗೂ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹೋರಾಟ ಆಯೋಜಿಸಲಾಗಿದೆ ಎಂದರು.
ಮಲೆಗೌಡ ಪಂಚಮಸಾಲಿ ಮಹಾಸಭಾದ ರಾಜ್ಯ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ವಿರೂಪಾಕ್ಷ ಗೌಡ, ರುದ್ರೇಗೌಡ, ಎಂ. ಪಿ. ವಿಜಯಕುಮಾರ್, ಚಂದ್ರಶೇಖರ ಗೌಡ, ವೀರೇಶ್ ಇದ್ದರು.
