ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಅರ್ಹ ಪುರುಷ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆ (Paternity Leave) ಮಂಜೂರು ಮಾಡಿ ನಿಗಮವು ಅಧಿಕೃತ ಸುತ್ತೋಲೆ ಹಾಗೂ ಅಧಿಸೂಚನೆಯನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ರಜಾ ನಿಯಮಗಳು 1964ರ ನಿಯಮ 20ರ ಅಡಿಯಲ್ಲಿ 20ಎ’ಎಂಬ ಹೊಸ ನಿಯಮವನ್ನು ಸೇರ್ಪಡೆಗೊಳಿಸಿ ಈ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ. ನಿಗಮದ ನಿರ್ದೇಶಕ ಮಂಡಳಿಯು 2021ರ ಡಿಸೆಂಬರ್ 28ರಂದು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. ಇದಕ್ಕೆ ಪೂರಕವಾಗಿ 2026ರ ಅಕ್ಟೋಬರ್ 27ರಂದು ಸಾರಿಗೆ ಇಲಾಖೆಯು ರಸ್ತೆ ಸಾರಿಗೆ ಸಂಸ್ಥೆಗಳ ಕಾಯ್ದೆ 1950ರ ಕಲಂ 45ರನ್ವಯ ಸರ್ಕಾರದ ಅನುಮೋದನೆ ನೀಡಿ ಆದೇಶಿಸಿತ್ತು. ಅದರಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಕೆ.ಬಿ. (ಭಾ.ಆ.ಸೇ.) ಅವರು ನವೆಂಬರ್ 24, 2026ರಂದು ಸುತ್ತೋಲೆ ಮತ್ತು ಅಧಿಸೂಚನೆ ಹೊರಡಿಸಿದ್ದು, ಬೆಂಮಸಾಸಂಸ್ಥೆ (BMTC), ವಾಕರಸಾಸಂಸ್ಥೆ (NWKRTC) ಹಾಗೂ ಕಕರಸಾಸಂಸ್ಥೆ (KKRTC) ವ್ಯವಸ್ಥಾಪಕ ನಿರ್ದೇಶಕರಿಗೂ ಮಾಹಿತಿಗಾಗಿ ಪ್ರತಿಗಳನ್ನು ರವಾನಿಸಿದ್ದಾರೆ.
ಪಿತೃತ್ವ ರಜೆಯ ಪ್ರಮುಖ ನಿಯಮಗಳು ಮತ್ತು ಷರತ್ತುಗಳು
- ರಜೆ ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ನಿಗಮದ ಪುರುಷ ನೌಕರನಿಗೆ ಆತನ ಪತ್ನಿಯ ಹೆರಿಗೆಯ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲಿದೆ.
- ಈ ರಜೆಯ ಅವಧಿಯಲ್ಲಿ ನೌಕರನು ರಜೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜೆಯ ವೇತನವನ್ನು ನೀಡಲಾಗುತ್ತದೆ.ಈಗಾಗಲೇ ಎರಡು ಅಥವಾ ಅದಕ್ಕಿಂತ ಹೆಚ್ಚಿಗೆ ಮಕ್ಕಳಿರುವ ಪುರುಷ ನಿಗಮದ ನೌಕರರಿಗೆ ಈ ಸೌಲಭ್ಯ ದೊರೆಯುವುದಿಲ್ಲ.
- ಪಿತೃತ್ವ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯಲಾಗುವುದಿಲ್ಲ ಹಾಗೂ ಸಾಂದರ್ಭಿಕ ರಜೆಯ (Casual Leave) ಹೊರತಾಗಿ ಯಾವುದೇ ಇತರ ರಜೆಯ ಜೊತೆಗೆ ಸಂಯೋಜನೆ ಮಾಡಬಹುದಾಗಿದೆ.
- ಪಿತೃತ್ವ ರಜೆಯನ್ನು ನಗದೀಕರಣಗೊಳಿಸಲು ಹಾಗೂ ಗಳಿಕೆ ರಜೆಯೊಂದಿಗೆ (Earned Leave) ವಿಲೀನಗೊಳಿಸಲು ಅವಕಾಶವಿರುವುದಿಲ್ಲ.
