ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲ್ಲೂಕಿನ ಮಂಡೇನಕೊಪ್ಪ ಗ್ರಾಮದಲ್ಲಿ ಭತ್ತದ ಫಸಲನ್ನು ಕಟಾವು ಮಾಡಿ ಕಳವು ಮಾಡಿರುವ ಆರೋಪ ಕೇಳಿಬಂದಿದೆ. ಹರಿಗೆಯಲ್ಲಿ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳುತ್ತಿದ್ದ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಲಾಗಿದೆ. ಇನ್ನೊಂದೆಡೆ ನಗರದ ಬಿ.ಎಚ್. ರಸ್ತೆಯ ಬ್ಲೂ ಮೂನ್ ಬಾರ್ ಮುಂಭಾಗ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಕಳವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಇವತ್ತಿನ ಶಿವಮೊಗ್ಗ ಶಾರ್ಟ್ ನ್ಯೂಸ್ ಇಲ್ಲಿದೆ.
ಮಂಡೇನಕೊಪ್ಪದಲ್ಲಿ ₹6.50 ಲಕ್ಷ ಮೌಲ್ಯದ ಭತ್ತ ಕಳವು ಆರೋಪ
ಮಂಡೇನಕೊಪ್ಪ ಗ್ರಾಮದ ಮುರಳೀಧರ್ ಅವರಿಗೆ ಸೇರಿದ 7 ಎಕರೆ 35 ಗುಂಟೆ ಜಮೀನಿನಲ್ಲಿ ಭತ್ತ ಬೆಳೆಯಲಾಗಿತ್ತು. ಜಮೀನಿಗೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಕೆಲವರು ಭತ್ತವನ್ನು ಕಟಾವು ಮಾಡಿಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರು ಮುರಳೀಧರ್ ಅವರಿಗೆ ತಿಳಿಸಿದ್ದರು. ಅವರು ಜಮೀನಿಗೆ ತೆರಳಿ ಪರಿಶೀಲಿಸಿದಾಗ ಫಸಲು ಕಳವಾಗಿರುವುದು ಗೊತ್ತಾಗಿದೆ. ಕಳವಾಗಿರುವ ಭತ್ತದ ಅಂದಾಜು ಮೌಲ್ಯ ₹6.50 ಲಕ್ಷ ಎಂದು ಆರೋಪಿಸಲಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಿಗೆ ಬಸ್ ನಿಲ್ದಾಣದಲ್ಲಿ ಚಾಲಕನ ಮೇಲೆ ಹಲ್ಲೆ ಆರೋಪ
ಖಾಸಗಿ ಬಸ್ ಚಾಲಕ ಗೌತಮ್ ಅವರು ಹರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಈ ವೇಳೆ ಕೆಲವರು ಅವರನ್ನು ಚಾಲಕನನ್ನ ಕೆಳಗೆ ಎಳೆದು, ಇಲ್ಲಿ ಬಸ್ ಏಕೆ ನಿಲ್ಲಿಸುತ್ತೀಯ ಎಂದು ಗಲಾಟೆ ಮಾಡಿದ್ದಾರೆ. ಬಳಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಗೌತಮ್ ಅವರ ತುಟಿಗೆ ಗಾಯವಾಗಿದೆ. ಗಲಾಟೆಯ ನಡುವೆ ಅವರು ಧರಿಸಿದ್ದ 20 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ಹೋಂಡಾ ಆಕ್ಟಿವಾ ಕಳವು
ನಗರದ ಬಿ.ಎಚ್. ರಸ್ತೆಯ ಬ್ಲೂ ಮೂನ್ ಬಾರ್ ಮುಂಭಾಗ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಕಳವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಓ.ಟಿ. ರಸ್ತೆಯ ಉದ್ಯಮಿ ಒಬ್ಬರು ಬ್ಲೂ ಮೂನ್ ಬಾರ್ ಮುಂಭಾಗ ಸ್ಕೂಟರ್ ನಿಲ್ಲಿಸಿದ್ದರು. ಅದೇ ದಿನ ರಾತ್ರಿ 10 ಗಂಟೆ ಸುಮಾರಿಗೆ ಮರಳಿ ಬಂದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಅದು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
