ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದೆನೇ ₹2,84,081 ಇನ್ನೊಬ್ಬರ ಅಕೌಂಟ್ಗೆ ವರ್ಗಾವಣೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ, ನಾಪ್‌ಟೋಲ್ ಹೆಸರಿನಲ್ಲಿ ಬಂದ ಲಕ್ಕಿ ಡ್ರಾ ಪತ್ರ ನಂಬಿದ ಕೃಷಿಕರೊಬ್ಬರು ₹4,04,600 ಕಳೆದುಕೊಂಡಿದ್ದಾರೆ. ಎರಡೂ ಘಟನೆಗಳ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸೈಬರ್ ವಂಚನೆ : ಒಟಿಪಿ ಹಂಚಿಕೊಳ್ಳದಿದ್ದರೂ ಖಾತೆಯಿಂದ ₹2,84,081 ವರ್ಗಾವಣೆ
ಬ್ಯಾಂಕ್ ಮ್ಯಾನೇಜರ್ ರೈತರಿಗೆ ಕರೆ ಮಾಡಿ, ಖಾತೆಯಿಂದ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಾವು ಯಾವುದೇ ಹಣ ವರ್ಗಾಯಿಸಿಲ್ಲ ಎಂದು ರೈತರು ತಿಳಿಸಿದ ಬೆನ್ನಲ್ಲೇ, ಖಾತೆಯಿಂದ ಒಟ್ಟು ₹2,84,081 ಕಡಿತವಾಗಿರುವ ಸಂದೇಶಗಳು ಅವರ ಮೊಬೈಲ್‌ಗೆ ಬಂದಿವೆ ಎಂದು ಆರೋಪಿಸಲಾಗಿದೆ. ರೈತರು ತಕ್ಷಣ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ಮೊಬೈಲ್ ಸಂದೇಶಗಳನ್ನು ಪರಿಶೀಲಿಸಿದಾಗ ಒಟಿಪಿಗಳು ಬಂದಿರುವುದು ಗೊತ್ತಾಗಿದೆ. ಆ ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ರೈತರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ವಂಚನೆ: ₹12.80 ಲಕ್ಷ ಬಹುಮಾನದ ಪತ್ರ ನಂಬಿ ₹4,04,600 ಕಳೆದುಕೊಂಡ ಕೃಷಿಕ
ಮತ್ತೊಂದು ಪ್ರಕರಣದಲ್ಲಿ ಕೃಷಿಕರೊಬ್ಬರಿಗೆ ಲಕ್ಕಿ ಡ್ರಾ ಹೆಸರಲ್ಲಿ ವಂಚಿಸಲಾಗಿದೆ. ರೈತರೊಬ್ಬರ ಮನೆಗೆ ಶಾಪಿಂಗ್ ಸಂಸ್ಥೆ ನಾಪ್‌ಟೋಲ್ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಬಂದಿದ್ದು, ಅದರಲ್ಲಿ ನಿಮಗೆ ಲಕ್ಕಿ ಡ್ರಾದಲ್ಲಿ ₹12.80 ಲಕ್ಷ ಬಹುಮಾನ ಬಂದಿದೆ, ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಎಂದು ಸೂಚಿಸಿದ್ದರು. ಅದರಂತೆ ಕರೆ ಮಾಡಿದ ರೈತರಿಗೆ, ಬಹುಮಾನದ ಹಣ ಪಡೆಯಲು ಮೊದಲು ₹12,800 ಶುಲ್ಕ ಪಾವತಿಸಬೇಕೆಂದು ಸೂಚಿಸಲಾಗಿತ್ತು. ಅದನ್ನು ನಂಬಿದ ಕೃಷಿಕರು ಹಣ ವರ್ಗಾಯಿಸಿದ್ದರು. ಹೀಗೆ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಹಾಗೂ ಕಾರ್ಪೊರೇಟ್ ತೆರಿಗೆ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದು, ಕೃಷಿಕರಿಂದ ಒಟ್ಟು ₹4,04,600 ಪಾವತಿಸಿಕೊಂಡಿದ್ದಾರೆ. ಬಳಿಕ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
