ಶಿವಮೊಗ್ಗದಲ್ಲಿ ಕಿರಣ್​ ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್; ಮೆಗ್ಗಾನ್ ಆಸ್ಪತ್ರೆಗೆ ಎಸ್‌ಪಿ ನಿಖಿಲ್ ಬಿ. ಭೇಟಿ

ಹಂಚಿಕೊಳ್ಳಿ
WhatsApp Facebook X Telegram
Kulli Kiran Murder Case in Shivamogga
Kulli Kiran Murder Case in Shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಮೇನಕೊಪ್ಪದಲ್ಲಿ ನಿನ್ನೆ ನಡೆದಿದ್ದ ಕುಳ್ಳಿ ಕಿರಣ್ (32) ಕೊಲೆ ಪ್ರಕರಣಕ್ಕೆ (Kulli Kiran Murder Case in Shivamogga) ಇಂದು ಬೆಳಗ್ಗೆ ಬೆಳಗ್ಗೆ ತಿರುವು ಸಿಕ್ಕಿದೆ. ಪ್ರಕರಣದ ಆರೋಪಿ ಉಮೇಶ್ ನಾಯ್ಕ್ (27) ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಪೊಲೀಸ್ ಗುಂಡೇಟಿಗೆ ಒಳಗಾದ ಉಮೇಶ್ ನಾಯ್ಕ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ರಾಮೇನಕೊಪ್ಪ ಪ್ರದೇಶದಲ್ಲಿ ಕುಳ್ಳಿ ಕಿರಣ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಸ್ಪೀಟ್ ಆಡುತ್ತಿದ್ದ ಸ್ಥಳದಲ್ಲಿಯೇ ಆತನ ಮೇಲೆ ದಾಳಿ ನಡೆದಿದ್ದು, ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿತ್ತು. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದರು.

ಪ್ರಕರಣದ ಕುರಿತು ನಿನ್ನೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ರಾಮೇನಕೊಪ್ಪ ಪ್ರದೇಶದಲ್ಲಿ 32 ವರ್ಷದ ಕುಳ್ಳಿ ಕಿರಣ್ ಎಂಬಾತನ ಕೊಲೆ ನಡೆದಿರುವುದನ್ನು ದೃಢಪಡಿಸಿದ್ದರು. ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.

ಈ ಕೊಲೆಯಲ್ಲಿ ಸುಮಾರು 2ರಿಂದ 3 ಮಂದಿ ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ ಎಂದೂ ಎಸ್‌ಪಿ ನಿಖಿಲ್ ಬಿ. ಅವರು ನಿನ್ನೆ ನೀಡಿದ ಬೈಟ್‌ನಲ್ಲಿ ಮಾಹಿತಿ ನೀಡಿದ್ದರು. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದುಬರಬೇಕಿದೆ ಎಂದಿದ್ದರು.

ಇದರ ಬೆನ್ನಲ್ಲೇ ಇಂದು ಪ್ರಕರಣದ ಆರೋಪಿಗಳ ಪೈಕಿ 27 ವರ್ಷದ ಉಮೇಶ್ ನಾಯ್ಕ್ ಮೇಲೆ ಪೊಲೀಸ್ ಫೈರಿಂಗ್ ನಡೆದಿದೆ ಎಂದು ಎಸ್‌ಪಿ ನಿಖಿಲ್ ಬಿ. ಮಾಹಿತಿ ನೀಡಿದ್ದಾರೆ. ಪೊಲೀಸ್ ಫೈರಿಂಗ್ ನಡೆದಿರುವುದನ್ನು ಅಧಿಕೃತವಾಗಿ ಖಚಿತಪಡಿಸಿರುವ ಅವರು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ವಾಟ್ಸಾಪ್ ಮಾಡಿದ್ದಾರೆ.

ಆದರೆ ಉಮೇಶ್ ನಾಯ್ಕ್ ಮೇಲೆ ಪೊಲೀಸರು ಯಾವ ಸ್ಥಳದಲ್ಲಿ ಫೈರಿಂಗ್ ನಡೆಸಿದರು, ಫೈರಿಂಗ್‌ಗೆ ಕಾರಣವಾದ ಸಂದರ್ಭವೇನು, ಆತನಿಗೆ ಎಲ್ಲಿ ಗುಂಡೇಟು ತಗುಲಿದೆ ಹಾಗೂ ಪ್ರಕರಣದಲ್ಲಿ ಆತನ ಪಾತ್ರವೇನು ಎಂಬ ಬಗ್ಗೆ ಇನ್ನಷ್ಟು ವಿವರಗಳು ಹೊರಬರಬೇಕಿವೆ. ಈ ಕುರಿತು ಪೊಲೀಸ್ ಇಲಾಖೆಯಿಂದ ಮುಂದಿನ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor