ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ತಾಲೂಕಿನ ಸಂತೆ ಕಡೂರು ಸಮೀಪ (Near Santhe Kadur in Shivamogga) ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಮಂಡೇನಕೊಪ್ಪ ಗ್ರಾಮದ ಎನ್. ರಕ್ಷಿತ್ (23) ಮೃತ ಯುವಕ. ನಿನ್ನೆ ನಡೆದ ಘಟನೆ ಸಂಬಂಧ ಲಭ್ಯವಾದ ಮಾಹಿತಿಯ ವಿವರ ಗಮನಿಸುವುದಾದರೆ, ಸಂತೆ ಕಡೂರು ಸಮೀಪದ ದೇವಕಿ ರೆಸಾರ್ಟ್ ಎದುರು ಚಲಿಸುತ್ತಿದ್ದ ಕಾರಿನ ಹಿಂಬದಿಗೆ ರಕ್ಷಿತ್ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ರಕ್ಷಿತ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿತ್ತು. ತಕ್ಷಣವೇ ಆತನನ್ನ ಆಸ್ಪತ್ರೆಗೆ ರವಾನಿಸಲಾಯ್ತಾದರೂ, ಅಷ್ಟರಲ್ಲಿ ಭಾರೀ ರಕ್ತ ಹೋಗಿದ್ದರಿಂದ ಆತ ಸಾವನ್ನಪ್ಪಿದ್ದಾನೆ . ಇನ್ನೂ ಘಟನೆ ಎಷ್ಟು ಭೀಕರವಾಗಿತ್ತು ಎಂದರೆ, ಕಾರಿನ ಹಿಂಭಾಗ ನುಜ್ಜುಗುಜ್ಜಾಗಿದ್ದರೆ, ಬೈಕ್ ಹುಡಿಯಾಗಿತ್ತು! ಅಷ್ಟೊಂದು ವೇಗವಾಗಿ ಹಿಂದಿನಿಂದ ಗುದ್ದಿದ್ದರಿಂದ ರಕ್ಷಿತ್ ಸಹ ಉಳಿಯಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ನದಿಗೆ ಬಿದ್ದು ಸಾವು
ಶೃಂಗೇರಿ ತಾಲೂಕಿನ ಹಾಲಂದೂರು ಸಮೀಪ ತುಂಗಾ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮಾಗಲು ಪ್ರತೀಕ್ (30) ಮೃತ ಯುವಕ. ಬೆಳಗ್ಗೆ ತುಂಗಾ ನದಿಯ ದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಆಳವಾದ ಗುಂಡಿಗೆ ಬಿದ್ದಿದ್ದಾರೆ. ಈಜು ಬಾರದ ಪ್ರತೀಕ್ ನೀರಿನಲ್ಲಿ ಮುಳುಗಿದ್ದಾರೆ. ಅವಿವಾಹಿತರಾಗಿರುವ ಇವರಿಗೆ ತಂದೆ, ತಾಯಿ ಹಾಗೂ ಸಹೋದರ ಇದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
