ಕುಳ್ಳಿ ಕಿರಣ್ ಹತ್ಯೆ ಪ್ರಕರಣ: ಆರೋಪಿ ಉಮೇಶ್ ನಾಯ್ಕ್ ಕಾಲಿಗೆ ಪೊಲೀಸ್ ಗುಂಡೇಟು!ಎನ್​ಕೌಂಟರ್​ ಸೈಟಲ್ಲಿ ನಡೆದಿದ್ದೇನು? ಎಸ್​ಪಿ ನಿಖಿಲ್​ ನೀಡಿದ ಕಂಪ್ಲೀಟ್ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
Police Shoot Umesh Naik in Leg in Kulli Kiran Murder Case in Shivamogga
Police Shoot Umesh Naik in Leg in Kulli Kiran Murder Case in Shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗದ ರಾಮೇನಕೊಪ್ಪದಲ್ಲಿ ನಿನ್ನೆ ಸಂಜೆ ನಡೆದ ರೌಡಿಶೀಟರ್ ಕುಳ್ಳಿ ಕಿರಣ್ (32) ಹತ್ಯೆ ಪ್ರಕರಣದ (Kulli Kiran Murder Case in Shivamogga) ಪ್ರಮುಖ ಆರೋಪಿ ಉಮೇಶ್ ನಾಯ್ಕ್ (27) ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಎನ್.ಆರ್.ಪುರ ರಸ್ತೆಯ ಲಿಂಗಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಉಮೇಶ್ ನಾಯ್ಕ್‌ನ ಎಡಗಾಲಿಗೆ ಗುಂಡೇಟು ತಗುಲಿದೆ.

ಕುಳ್ಳಿ ಕಿರಣ್ ಹತ್ಯೆ ನಡೆದ ಬಳಿಕ ಪರಾರಿಯಾಗಿದ್ದ ಉಮೇಶ್ ನಾಯ್ಕ್‌ನ ಪತ್ತೆಗೆ ತುಂಗಾ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಎನ್.ಆರ್.ಪುರ ಭಾಗದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಪೊಲೀಸರು ಶಿವಮೊಗ್ಗಕ್ಕೆ ಕರೆತರುತ್ತಿದ್ದ ವೇಳೆ ಲಿಂಗಾಪುರ ಗ್ರಾಮದ ಸಮೀಪ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಪೊಲೀಸರ ವಶದಲ್ಲಿದ್ದ ಉಮೇಶ್ ನಾಯ್ಕ್ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ತಮ್ಮಣ್ಣ ಅವರ ಎಡ ಭುಜಕ್ಕೆ ಚೈನ್‌ನಿಂದ ಹಲ್ಲೆ ನಡೆಸಿ ಅಲ್ಲಿಂದ ಓಡಿಹೋಗಲು ಮುಂದಾಗಿದ್ದಾನೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಗೊಂಡಿದ್ದ ಡಿಪಾರ್ಟ್​ಮೆಂಟ್ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾತನಾಡಿದ ಎಸ್​ಪಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ಮೊದಲು ಎಚ್ಚರಿಕೆ ನೀಡಿದ್ದಾರೆ. ಆದರೂ ಉಮೇಶ್ ನಾಯ್ಕ್ ತಪ್ಪಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದರಿಂದ ಇನ್ಸ್‌ಪೆಕ್ಟರ್ ಗುರುರಾಜ್ ತಮ್ಮ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಉಮೇಶ್ ನಾಯ್ಕ್‌ನ ಎಡಗಾಲಿಗೆ ತಗುಲಿದೆ.

ಘಟನೆಯಲ್ಲಿ ಗಾಯಗೊಂಡ ಆರೋಪಿ ಉಮೇಶ್ ನಾಯ್ಕ್ ಹಾಗೂ ಹಲ್ಲೆಗೊಳಗಾದ ಕಾನ್ಸ್‌ಟೇಬಲ್ ತಮ್ಮಣ್ಣ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆರೋಪಿ ಮೇಲೆ ನಡೆದ ಫೈರಿಂಗ್‌ಗೆ ಸಂಬಂಧಿಸಿದಂತೆ ಎಸ್‌ಪಿ ನಿಖಿಲ್ ಬಿ. ಮಾಧ್ಯಮಗಳಿಗೆ ಘಟನೆಯ ವಿವರ ನೀಡಿದ್ದಾರೆ.

ನಿನ್ನೆ ನಡೆದಿದ್ದ ಕುಳ್ಳಿ ಕಿರಣ್ ಹತ್ಯೆ

ಶಿವಮೊಗ್ಗದ ರಾಮೇನಕೊಪ್ಪ ಪ್ರದೇಶದಲ್ಲಿ ನಿನ್ನೆ ಸಂಜೆ ಕುಳ್ಳಿ ಕಿರಣ್‌ನ ಹತ್ಯೆ ನಡೆದಿತ್ತು. ಕುಳ್ಳಿ ಕಿರಣ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣದ ಕುರಿತು ನಿನ್ನೆಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಎಸ್‌ಪಿ ನಿಖಿಲ್ ಬಿ., ಕುಳ್ಳಿ ಕಿರಣ್ ಹತ್ಯೆಯ ಹಿಂದೆ ಪ್ರಾಥಮಿಕವಾಗಿ ವೈಯಕ್ತಿಕ ಹಣಕಾಸಿನ ವಿಚಾರ ಇರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು. ಪ್ರಕರಣದಲ್ಲಿ 2ರಿಂದ 3 ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ ಎಂದಿದ್ದರು.

ಸದ್ಯ ಪ್ರಮುಖ ಆರೋಪಿ ಉಮೇಶ್ ನಾಯ್ಕ್ ಪೊಲೀಸರ ವಶದಲ್ಲಿದ್ದಾನೆ. ಪ್ರಕರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಹಾಗೂ ಹತ್ಯೆಗೆ ಸಂಬಂಧಿಸಿದ ಪೂರ್ಣ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor