ಮಲೆನಾಡು ಟುಡೆ ಸುದ್ದಿ / ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಪತ್ತೆಯಾಗಿದ್ದಾಳೆ.
ಈಕೆಯನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ದಾರಿ ತಪ್ಪಿ ಅರಣ್ಯದೊಳಗೆ ಅಲೆದಾಡಿದ್ದ ಯುವತಿ ಪಾಳುಬಿದ್ದ ಬಂಗಲೆಯೊಂದರಲ್ಲಿ ಆಶ್ರಯ ಪಡೆದಿದ್ದರು. ಅವರನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ಕೇರಳ ರಾಜ್ಯದ ಕೋಯಿಕ್ಕೋಡ್ ನಿವಾಸಿಯಾಗಿರುವ 35 ವರ್ಷದ ಶರಣ್ಯ ಅವರು ಎರ್ನಾಕುಲಂನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದಕ್ಕೆ ಆಗಮಿಸಿದ್ದರು. ಬಳಿಕ ಬೆಳಿಗ್ಗೆ 8.30ರ ಸುಮಾರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಲು ಅರಣ್ಯ ಇಲಾಖೆಯ ತಪಾಸಣಾ ಕೇಂದ್ರಕ್ಕೆ ಬಂದಿದ್ದರು. ಒಂಟಿಯಾಗಿ ಚಾರಣಕ್ಕೆ ಅವಕಾಶ ಇಲ್ಲದ ಕಾರಣ, ಅಲ್ಲಿಗೆ ಬಂದಿದ್ದ ಬೇರೊಂದು ತಂಡದೊಂದಿಗೆ ಅವರನ್ನು ಅರಣ್ಯ ಸಿಬ್ಬಂದಿ ಕಳುಹಿಸಿಕೊಟ್ಟಿದ್ದರು. ಮಧ್ಯಾಹ್ನ 1.30ರ ವೇಳೆಗೆ ಅವರು ಅದೇ ತಪಾಸಣಾ ಕೇಂದ್ರಕ್ಕೆ ವಾಪಸಾಗಬೇಕಿತ್ತು.
ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು
ಶರಣ್ಯ ಅವರನ್ನು ಕರೆತರಲು ಹೋಂಸ್ಟೇ ಮಾಲೀಕ ನಂದ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತಪಾಸಣಾ ಕೇಂದ್ರದ ಬಳಿ ಬಂದು ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ್ದ ಶರಣ್ಯ, ತಾನು ದಾರಿ ತಪ್ಪಿರುವುದಾಗಿ ಮಾಹಿತಿಯನ್ನು ನೀಡಿದ್ದರು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದರು. ಆದರೆ ಗುರುವಾರದಿಂದ ಅವರ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಏಪ್ರಿಲ್ 2ರಂದು ದಾರಿ ತಪ್ಪಿದ್ದ ಶರಣ್ಯ ಅವರು ಕಾಡಿನಲ್ಲಿ ನಡೆದು ಸುಸ್ತಾಗಿ ಕೊನೆಗೆ ಅರಣ್ಯದಲ್ಲಿದ್ದ ಹಳೆಯ, ಪಾಳುಬಿದ್ದ ಬಂಗಲೆಯೊಂದನ್ನು ಸೇರಿದ್ದರು. ಕಾಡಿನಿಂದ ಹೊರಬರುವ ದಾರಿ ತಿಳಿಯದೆ ಅವರು ಅಲ್ಲೇ ಉಳಿದುಕೊಂಡಿದ್ದರು. ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಕಳೆದುಹೋಗಿದ್ದ ಅವರನ್ನು ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಿದ್ದು, ನಿತ್ರಾಣಗೊಂಡಿದ್ದ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುತ್ತಿದ್ದಾರೆ. ಯುವತಿ ಸುರಕ್ಷಿತವಾಗಿ ಮರಳಲಿ ಎಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗದವರು ತಮ್ಮ ಆರಾಧ್ಯ ದೈವ ಮಲೆ ತಮ್ಮಚ್ಚ ದೇವರಿಗೆ ಹರಕೆ ಕೂಡ ಹೊತ್ತಿದ್ದರು. ಸ್ಥಳೀಯ ಜನಾಂಗದವರ ಮತ್ತು ಅಧಿಕಾರಿಗಳ ಸತತ ಶ್ರಮದ ಫಲವಾಗಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Missing Kerala Trekker Sharanya Found Safe After 4 Days in Kodagu ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳ ಯುವತಿ ಶರಣ್ಯ ಪತ್ತೆ
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.