ಸುಮ್ಮನೆ ಹೇಳಬಾರದು! ದೇವರೂ ಕೈ ಬಿಟ್ಟಾಗ ಆಸರೆ ಕೊಟ್ಟರು ಊರ ಮಂದಿ! ಒಂದೊಳ್ಳೆ ಕೆಲಸ ನೀವು ಮೆಚ್ಚುವರಿ

Melina Sampalli Hosanagara /ಮಲೆನಾಡು ಟುಡೆ ಸುದ್ದಿ / ಹೊಸನಗರ / ಬಡತನಕ್ಕೆ ಹಸಿವು ಜಾಸ್ತಿ , ದಾರಿದ್ರ್ಯವೂ ಜಾಸ್ತಿ, ಗೃಹಚಾರವೂ ಜಾಸ್ತಿ! ಇದರಲ್ಲಿ ಯಾವೊಂದು ಅನುಮಾನವೂ ಬೇಡ. ಆದರೆ ಇಂತಹ ಬಡತನದ ನಡುವೆ ಯಾವುದೊ ಒಂದು ಕೈ ನೆರವಿನ ಆಸರೆಯನ್ನು ನೀಡಿದಾಗ ಸಿಗುವ ಸಂತೋಷವೇ ಬೇರೆ.. ಸಮಾಜದ ಮಾನವೀಯತೆಗೆ ಕೈ ಎತ್ತಿಮುಗಿಯುವಂತಹ ಸನ್ನಿವೇಶ ಅದು. ಅಂತಹದ್ದೊಂದು ಸನ್ನಿವೇಶಕ್ಕೆ ನಮ್ಮ ಹೊಸನಗರ ಸಾಕ್ಷಿಯಾಗಿದ್ದರ ಕಥೆ ಇಲ್ಲಿದೆ ಓದಿ.

ಬೀದಿಗೆ ಬಿದ್ದವರನ್ನು ಕಂಡು ಮರುಕಪಟ್ಟು ಅಯ್ಯೋ ಪಾಪ ಎಂದು ಹೇಳಿದರೂ ಸಹ ಮರುಕ್ಷಣದಲ್ಲಿ ನಮಗ್ಯಾಕೆ ಉಸಾಬರಿ , ನಮ್ಮದ ನೂರ ಹನ್ನೊಂದು..ಆಲ್​ ರೈಟ್ ಮುಂದಕ್ಕೆ ನಡಿ ಎನ್ನುತ್ತೆ ಸಮಾಜ. ಇಂತಹ ಸಮಾಜದಲ್ಲೊಂದು ಭವಿಷ್ಯದ ದಿಕ್ಕು ಕಾಣದ ಕುಟುಂಬವೊಂದಕ್ಕೆ ಆಸರೆಯ ಸೂರು ತೋರಣಕಟ್ಟಿಕೊಂಡು ಒಕ್ಕಲಿಗೆ ಬಂದು ನಿಂತಾಗ ಎದುರುಗೊಳ್ಳುವುದು ಗದ್ಗದಿತಾಗುವ ಮನಸ್ಸು ಮಾತ್ರ.

ಉಪಮಾನದ ಹೋಲಿಕೆಯಿಲ್ಲದೆಯು ಈ ವರದಿಯನ್ನ ಹೇಳಬಹುದು. ಅಷ್ಟೆ…ಅಷ್ಟೆ ಎಂಬಷ್ಟೆ ಈ ವರದಿ ನಿಲ್ಲ ಬಾರದು, ಕೈಲಾಗಿದ್ದ ಮಾಡಿದವರ ಬಗ್ಗೆ ನಾಲ್ಕು ಒಳ್ಳೆಮಾತು ನಾಲ್ಕಾರು ಕಡೆ ಜನ ಹೇಳಬೇಕು, ಮಂದಿ ಮಾತನಾಡಬೇಕು. ಆಕಾರಣಕ್ಕೆ ವರದಿ ಪ್ರಸಂಟೇಶನ್​ನಲ್ಲಿ ಮಾನವೀಯತೆಯನ್ನು ಸೇರಿಸಿ ಓದುಗರನ್ನು ನಡೆದ ವಿಚಾರಕ್ಕೆ ಸಾಕ್ಷಿಯಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ.

Malenadu Today Shivamogga
New House for Disabled Girl in Melina Sampalli Hosanagara

ಅಂದಹಾಗೆ, ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದಲ್ಲಿ (Melina Sampalli Hosanagara) ಒಂದು ಕುಟುಂಬ ಇದೆ. ಆ ಕುಟುಂಬದ ಪರಿಸ್ಥಿತಿ ದಯನೀಯ. ವಿಕಲಚೇತನ ತರುಣಿ ಜೊತೆಗೆ ತಾಯಿ ಒಬ್ಬಳು, ಜೀವ ಗಟ್ಟಿ ಇರುವರೆಗೂ ಇರಬೇಕು, ಬಿಟ್ಟರೆ ಬೇರೆ ವಿಧಿಯಿಲ್ಲ ಎಂಬಂತೆ ಬದುಕುತ್ತಿದ್ದರು. ಇದೀಗ ಈ ಕುಟುಂಬದಲ್ಲಿ ಹೊಸ ಬೆಳಕು ಮೂಡಿದೆ.

ಮೇಲಿನ ಸಂಪಳ್ಳಿ ಗ್ರಾಮದ ಪೂಜಾ ಎಂಬ 22 ವರ್ಷದ ಯುವತಿ ಹುಟ್ಟಿದಾಗಿನಿಂದಲೇ ನಡೆಯಲಾಗದು. ಮಲಗಿದ್ದಲ್ಲಿಯೇ ಎಲ್ಲ . ಈಕೆಯ ತಾಯಿ ಶಶಿಕಲಾಗೆ ಕಿವುಡುತನದ ಸಮಸ್ಯೆ. ಮನೆ ಯಜಮಾನ ಭೋಜಪ್ಪ ದೈವಾದೀನ. ವೈಯಕ್ತಿಕ ಇಷ್ಟಾದರೆ ಬದುಕು ಬಡತನದ ಮೇರು ಸಾಕ್ಷಿಯಾಗಿತ್ತು. ಸಾಲದಕ್ಕೆ ಗೃಹಚಾರಕ್ಕೆ 2023 ರಲ್ಲಿ ಗಾಳಿ ಮಳೆ ಇದ್ದ ಸೂರು ಕೂಡ ಮಣ್ಣುಪಾಲಾಯ್ತು. ಹೀಗೆ ಬೀದಿಗೆ ಬಿದ್ದ ಬದುಕನ್ನ ಗಟ್ಟಿಗಿತ್ತಿ ಶಶಿಕಲಾ ಗ್ರಾಮಸ್ಥರ ನೆರವಿನಿಂದ ಹತ್ತಿರದ ಸಭಾ ಭವನಕ್ಕೆ ತಂದು ಆಸರೆ ಮಾಡಿದಳು. ನೆಲೆಯಾಯಿತಾದರೂ, ದುಡಿಮೆಗೆ ದಾರಿ ಸಿಗಲಿಲ್ಲ. ಸಿಕ್ಕಿದರೂ ಹೋಗಲಾಗಲಿಲ್ಲ. ಹೀಗಾಗಿ ನೆರೆಹೊರೆಯವರು ಕೊಟ್ಟಿದ್ದನ್ನ ತೆಗೆದುಕೊಂಡು ಜೀವನ ಸಾಗಿಸಲಾರಂಭಿಸಿದರು. ಇದೇ ನ್ಯೂ ನಾರ್ಮಲ್​ ಎನಿಸಿದ್ದಾಗಲೇ ಶಶಿಕಲಾರ ಬದುಕಲ್ಲೆ ತಿರುವು ಸಿಕ್ಕಿದೆ.

New House for Disabled Girl in Melina Sampalli Hosanagara
New House for Disabled Girl in Melina Sampalli Hosanagara

ಈ ಕುಟುಂಬದ ಬಗ್ಗೆ ಮಾಹಿತಿ ಕೇಳಿ ತಿಳಿದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಬಂದು 50,000 ರೂಪಾಯಿ ಧನಸಹಾಯ ಮಾಡಿ ಹೋದರು. ಅಲ್ಲದೆ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವಕರನ್ನು ಒಗ್ಗೂಡಿಸಿ ಆಸರೆ ಹೆಸರಿನ ಸಮಿತಿಯನ್ನು ರಚಿಸಿ, ನೊಂದ ಕುಟುಂಬಕ್ಕೆ ಶಾಶ್ವತ ಮನೆಯೊಂದನ್ನು ನಿರ್ಮಿಸಿಕೊಡಲು ಮುಂದಾದರು.

ಹೀಗೆ ಕೈ ಕೈ ಜೋಡಿಸಿ ಕಳೆದ 2 ವರ್ಷಗಳಲ್ಲಿ 6,00,000 ರೂಪಾಯಿ ಸಂಗ್ರಹವಾಗಿತ್ತು. ಒಂದು ಚೆಂದ ಸೂರು ತಲೆ ಎದ್ದಿತು. ನೂತನ ಮನೆಗೆ ಶಶಿಕಲಾ ಗೃಹಪ್ರವೇಶದೊಂದಿಗೆ ಒಳಬಂದರು. ಊರಿನೆಲ್ಲರೂ ಸೇರಿ ಒಳ್ಳೆದಾಗಲಿ, ಇರುವಷ್ಟು ದಿನ ಚೆನ್ನಾಗಿರಮ್ಮ ಎಂದು ಹರಿಸಿ ಕೈಲಾಗಿದ್ದ ನೆರವು ನೀಡಿದರು. ಹೀಗೆ ಇಡೀ ಊರು, ಆ ಊರಿನ ಶಾಸಕರು ಸೇರಿ ಶಶಿಕಲಾರ ಬದುಕಿಕೊಂದು ಆಶ್ರಯ ನೀಡಿದ ಮಾದರಿಯಾದರು.

Malenadu Today Shivamogga
New House for Disabled Girl in Melina Sampalli Hosanagara

ಈ ಗೃಹ ಪ್ರವೇಶ ಸಮಾರಂಭದಲ್ಲಿ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಹೂವಿನಕೋಣೆ ಚಿದಂಬರಂ, ಮಾರುತಿಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ದೀಪಿಕಾ, ಕಳೂರು ಶ್ರೀ ರಾಮೇಶ್ವರ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಜಿ.ಆರ್. ಚಿನ್ನಪ್ಪ ಹಾಗೂ ಗ್ರಾಮಸ್ಥರಾದ ಕೃಷ್ಣಮೂರ್ತಿ, ಅವಿನಾಶ್, ಇಂದ್ರೇಶ್, ನಾರಾಯಣಪ್ಪ, ಕೆಂಜಿಯಪ್ಪ, ರವೀಂದ್ರ, ನಾಗರಾಜ್, ರತ್ನಮ್ಮ, ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದು ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಿದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz