ಮಹಾರಾಜ ಟ್ರೋಪಿ : ಶಿವಮೊಗ್ಗ ಯೋಧಾಸ್​ಗೆ ಒಂದು ಜಯ, ಒಂದು ಸೋಲು! ಮ್ಯಾಚ್​ ಡಿಟೇಲ್ಸ್ ಓದಿ

Maharaja Trophy T20 /ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ / ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಿಎಸಿಎಸ್ಎಸ್ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಿನ್ನೆ ದಿನ ಭಾನುವಾರ ಜೂನ್ 21 ರಂದು ನಡೆದ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡದ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ತಂಡವು 16 ರನ್‌ಗಳ ಜಯ ಸಾಧಿಸಿದೆ.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಎದುರು 90 ರನ್‌ಗಳ ಅಂತರದ ಗೆಲುವು ಕಂಡಿದ್ದ ಶಿವಮೊಗ್ಗ ಯೋಧಾಸ್ ತಂಡವು ಭಾನುವಾರದ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಭಾನುವಾರದ ಮತ್ತೊಂದು ಪಂದ್ಯದಲ್ಲಿ ಕರಾವಳಿ ಕಿಂಗ್ಸ್ ಮಂಗಳೂರು ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ ಆಟವು ಮಳೆಯ ಕಾರಣದಿಂದ ಒಂದು ಎಸೆತವೂ ಕಾಣದೆ ರದ್ದಾಗಿದೆ.

Maharaja Trophy T20 4ನೇ ಮ್ಯಾಚ್​

ಮೈದಾನ ಒದ್ದೆಯಾಗಿದ್ದ ಕಾರಣ ಭಾನುವಾರದ ಪಂದ್ಯವನ್ನು ಮೊದಲು 14 ಓವರ್‌ಗಳಿಗೆ ಹಾಗೂ ನಂತರ 10 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 10 ಓವರ್‌ಗಳ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು. ಆರಂಭಿಕ ಆಟಗಾರ ಭುವನ್ ಮೋಹನ್ ರಾಜು 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 23 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ರೋಹನ್ ಪಾಟೀಲ್ ಮತ್ತು ಕೃಷ್ಣನ್ ಶ್ರೀಜಿತ್ ಮುರಿಯದ ಎರಡನೇ ವಿಕೆಟ್‌ಗೆ 45 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟವಾಡಿದರು. ರೋಹನ್ ಪಾಟೀಲ್ 23 ಎಸೆತಗಳಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 51 ರನ್ ಕಲೆಹಾಕಿದರೆ, ಕೃಷ್ಣನ್ ಶ್ರೀಜಿತ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ಅಜೇಯ 47 ರನ್ ಬಾರಿಸಿದರು. ಶಿವಮೊಗ್ಗ ಯೋಧಾಸ್ ಪರ ಶ್ರೀಶಾ ಆಚಾರ್ 15 ರನ್ ನೀಡಿ 1 ವಿಕೆಟ್ ಪಡೆದರು.

ವಿಜೆಡಿ ನಿಯಮದನ್ವಯ 10 ಓವರ್‌ಗಳಲ್ಲಿ 136 ರನ್‌ಗಳ ಪರಿಷ್ಕೃತ ಗುರಿ ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ ತಂಡವು 7 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡವು 5 ಓವರ್‌ಗಳ ಅಂತ್ಯಕ್ಕೆ 54 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಯಶೋವರ್ಧನ್ ಪರಂತಪ್ 16 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸೇರಿ 38 ರನ್ ಗಳಿಸಿದರು. ಉಳಿದಂತೆ ಅನೀಶ್ ಕೆವಿ 12 ರನ್, ಹರ್ಷಿಲ್ ಧರ್ಮಾನಿ 13 ರನ್, ಆದರ್ಶ್ ಪ್ರಜ್ವಲ್ 17 ರನ್ ಮತ್ತು ನವೀನ್ ಎಂಜಿ 16 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರ ಶುಭಾಂಗ್ ಹೆಗ್ಡೆ 9 ರನ್‌ಗೆ 2 ವಿಕೆಟ್, ಪ್ರವೀಣ್ ದುಬೆ 24 ರನ್‌ಗೆ 2 ವಿಕೆಟ್ ಮತ್ತು ಶ್ರೀವತ್ಸ ಆಚಾರ್ಯ 34 ರನ್‌ಗೆ 2 ವಿಕೆಟ್ ಕಬಳಿಸಿದರು.

Maharaja Trophy T20 2ನೇ ಮ್ಯಾಚ್​

ಶನಿವಾರ ಜೂನ್ 20 ರಂದು ಇದೇ ಮೈದಾನದಲ್ಲಿ ನಡೆದ ಟೂರ್ನಿಯ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಯೋಧಾಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. ವಿಕೆಟ್ ಕೀಪರ್ ಲುವ್ನಿತ್ ಸಿಸೋಡಿಯಾ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 58 ರನ್ ಗಳಿಸಿ ಲವಿಶ್ ಕೌಶಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ತುಷಾರ್ ಸಿಂಗ್ 21 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 33 ರನ್ ಬಾರಿಸಿ ಮನೋಜ್ ಭಾಂಡಗೆ ಎಸೆತದಲ್ಲಿ ಎಲ್ ಆರ್ ಚೇತನ್‌ಗೆ ಕ್ಯಾಚ್ ನೀಡಿದರು. ನಾಯಕ ಸ್ಮರಣ್ ರವಿಚಂದ್ರನ್ 27 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 36 ರನ್ ಗಳಿಸಿ ಮಾಧವ್ ಬಜಾಜ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರೆ, ಹರ್ಷಿಲ್ ಧರ್ಮಾನಿ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿ ವಿಜಯ್‌ಕುಮಾರ್ ವೈಶಾಕ್ ಎಸೆತದಲ್ಲಿ ಔಟಾದರು.

ಉಳಿದಂತೆ ಆದರ್ಶ್ ಪ್ರಜ್ವಲ್ 7 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 12 ರನ್, ಯಶೋವರ್ಧನ್ ಪರಂತಪ್ 3 ಎಸೆತಗಳಲ್ಲಿ 4 ರನ್, ನವೀನ್ ಎಂಜಿ 3 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು. ಅನೀಶ್ ಕೆವಿ ಖಾತೆ ತೆರೆಯದೆ ನಿರ್ಗಮಿಸಿದರು. ಮೊಹ್ಸಿನ್ ಖಾನ್ ಮತ್ತು ಅಭಿಲಾಷ್ ಶೆಟ್ಟಿ ರನ್ ಗಳಿಸದೆ ಅಜೇಯರಾಗಿ ಉಳಿದರು. ಶ್ರೀಶಾ ಆಚಾರ್ ಹಾಗೂ ಯಶ್ ರಾಜ್ ಪುಂಜ ಬ್ಯಾಟಿಂಗ್ ಮಾಡಲಿಲ್ಲ. ಶಿವಮೊಗ್ಗ ಇನ್ನಿಂಗ್ಸ್‌ನಲ್ಲಿ 1 ಬೈ, 1 ಲೆಗ್ ಬೈ ಮತ್ತು 6 ವೈಡ್ ಸೇರಿದಂತೆ ಒಟ್ಟು 8 ಹೆಚ್ಚುವರಿ ರನ್‌ಗಳು ಲಭಿಸಿದವು. 6.5 ಓವರ್‌ಗಳಲ್ಲಿ 79 ರನ್‌ಗೆ ಮೊದಲ ವಿಕೆಟ್ ಪತನಗೊಂಡರೆ, 19.5 ಓವರ್‌ಗಳಲ್ಲಿ 189 ರನ್ ಆಗುವಷ್ಟರಲ್ಲಿ 8ನೇ ವಿಕೆಟ್ ಬಿತ್ತು. ಪವರ್ ಪ್ಲೇ ಓವರ್‌ಗಳಲ್ಲಿ ತಂಡವು 76 ರನ್ ಗಳಿಸಿತ್ತು.

ಮೈಸೂರು ವಾರಿಯರ್ಸ್ ತಂಡದ ಪರ ಬೌಲಿಂಗ್‌ನಲ್ಲಿ ವಿಜಯ್‌ಕುಮಾರ್ ವೈಶಾಕ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಹಾಗೂ ಮನೋಜ್ ಭಾಂಡಗೆ 3 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರು. ಲವಿಶ್ ಕೌಶಲ್ 4 ಓವರ್‌ಗಳಲ್ಲಿ 43 ರನ್ ಕೊಟ್ಟು 1 ವಿಕೆಟ್, ಮೋನಿಶ್ ರೆಡ್ಡಿ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಮತ್ತು ಮಾಧವ್ ಬಜಾಜ್ 1 ಓವರ್‌ನಲ್ಲಿ 7 ರನ್ ನೀಡಿ 1 ವಿಕೆಟ್ ಪಡೆದರು. ರಿತೇಶ್ ಭಟ್ಕಳ್ 4 ಓವರ್‌ಗಳಲ್ಲಿ 44 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಶಿವಮೊಗ್ಗ ಯೋಧಾಸ್ ತಂಡವು 90 ರನ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz