ಮಲೆನಾಡು ಟುಡೆ ಸುದ್ದಿ / ಬಾಣಾವರ / ಜಾವಗಲ್ನಲ್ಲಿ ನಡೆಯುವ ವಾರ್ಷಿಕ ಉರುಸ್ ಆಚರಣೆಯಲ್ಲಿ ಭಾಗವಹಿಸುವ ಪ್ರಯಾಣಿಕರು ಹಾಗೂ ಭಕ್ತರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಾಣಾವರ ರೈಲು ನಿಲ್ದಾಣದಲ್ಲಿ ತಾಳಗುಪ್ಪ–ಮೈಸೂರು ಡೈಲಿ ಎಕ್ಸ್ಪ್ರೆಸ್ ಸೇರಿದಂತೆ 8 ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ಸಂಬಂಧ ನೀಡಿರುವ ಪ್ರಕಟಣೆಯ ಪ್ರಕಾರ ವಿಷಯ ವಿವರ ಹೀಗಿದೆ.
ಸೆಪ್ಟೆಂಬರ್ 23ರಿಂದ 27ರವರೆಗೆ ಈ ತಾತ್ಕಾಲಿಕ ನಿಲುಗಡೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಕೆಎಸ್ಆರ್ ಬೆಂಗಳೂರು–ಹೊಸಪೇಟೆ, ಮೈಸೂರು–ತಾಳಗುಪ್ಪ, ಕೆಎಸ್ಆರ್ ಬೆಂಗಳೂರು–ಧಾರವಾಡ, ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ಸೇರಿದಂತೆ ಎರಡೂ ದಿಕ್ಕಿನಲ್ಲಿ ಸಂಚರಿಸುವ ಆಯ್ದ ರೈಲುಗಳು ಬಾಣಾವರ ನಿಲ್ದಾಣದಲ್ಲಿ ತಲಾ 1 ನಿಮಿಷ ನಿಲ್ಲಲಿವೆ.
- ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು–ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಬೆಳಿಗ್ಗೆ 08:35ಕ್ಕೆ ಬಾಣಾವರ ತಲುಪಿ 08:36ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ದೈನಂದಿನ ಎಕ್ಸ್ಪ್ರೆಸ್ ಬೆಳಿಗ್ಗೆ 09:07ಕ್ಕೆ ಆಗಮಿಸಿ 09:08ಕ್ಕೆ ಪ್ರಯಾಣ ಮುಂದುವರಿಸಲಿದೆ.
- ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ದಗಂಗಾ ದೈನಂದಿನ ಎಕ್ಸ್ಪ್ರೆಸ್ ಮಧ್ಯಾಹ್ನ 15:20ಕ್ಕೆ ಬಾಣಾವರ ತಲುಪಿ 15:21ಕ್ಕೆ ಹೊರಡಲಿದೆ. ರೈಲು ಸಂಖ್ಯೆ 20651 ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ದೈನಂದಿನ ಎಕ್ಸ್ಪ್ರೆಸ್ ಸಂಜೆ 17:27ಕ್ಕೆ ಆಗಮಿಸಿ 17:28ಕ್ಕೆ ತೆರಳಲಿದೆ.
- ತಾಳಗುಪ್ಪದಿಂದ ಕೆಎಸ್ಆರ್ ಬೆಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 20652 ದೈನಂದಿನ ಎಕ್ಸ್ಪ್ರೆಸ್ ಬೆಳಿಗ್ಗೆ 08:40ಕ್ಕೆ ಬಾಣಾವರ ತಲುಪಿ 08:41ಕ್ಕೆ ಹೊರಡಲಿದೆ. ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ದೈನಂದಿನ ಎಕ್ಸ್ಪ್ರೆಸ್ ಬೆಳಿಗ್ಗೆ 10:30ಕ್ಕೆ ಆಗಮಿಸಿ 10:31ಕ್ಕೆ ಪ್ರಯಾಣ ಮುಂದುವರಿಸಲಿದೆ.
- ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ದೈನಂದಿನ ಎಕ್ಸ್ಪ್ರೆಸ್ ಸಂಜೆ 18:23ಕ್ಕೆ ಬಾಣಾವರ ತಲುಪಿ 18:24ಕ್ಕೆ ಹೊರಡಲಿದೆ. ರೈಲು ಸಂಖ್ಯೆ 56520 ಹೊಸಪೇಟೆ–ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸಂಜೆ 18:43ಕ್ಕೆ ಆಗಮಿಸಿ 18:44ಕ್ಕೆ ತೆರಳಲಿದೆ.
ಜಾವಗಲ್ ಉರುಸ್ಗೆ ತೆರಳುವ ಪ್ರಯಾಣಿಕರು ಮತ್ತು ಭಕ್ತರ ಅನುಕೂಲಕ್ಕಾಗಿ ಸೆಪ್ಟೆಂಬರ್ 27ರವರೆಗೆ ಮಾತ್ರ ಈ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಇರಲಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
