ಶಿವಮೊಗ್ಗದ ಮೇಲೆ ಮೂರನೇ ಕಣ್ಣು: ಅಕ್ರಮ ಚಟುವಟಿಕೆಗಳಿಗೆ ಡ್ರೋನ್ ಹಾಗೂ ಸಿಸಿಟಿವಿ ಬ್ರೇಕ್!

High-Tech Drone ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲುಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ, ಜೂಜಾಟ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಹೈಟೆಕ್ ಕಣ್ಣಾವಲು ಇರಿಸಿದೆ. ಜಿಲ್ಲೆಯಾದ್ಯಂತ ಅಳವಡಿಸಲಾಗಿರುವ 30,104 ಜಿಯೋ ಟ್ಯಾಗ್ ಸಿಸಿಟಿವಿ ಕ್ಯಾಮರಾಗಳು ಹಾಗೂ ಡ್ರೋನ್​ ಕ್ಯಾಮರಾಗಳ ಮೂಲಕ ಅಪರಾಧಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 

ಮುಂದಿನ ಐದು ದಿನ ! ಮಳೆ ಮತ್ತು ಬಿಸಿಲು? ಹೇಗಿರಲಿದೆ ಶಿವಮೊಗ್ಗದ ವಾತಾವರಣ!

ಶಿವಮೊಗ್ಗವು ಮೊದಲಿನಿಂದಲೂ ಸೂಕ್ಷ್ಮ ಪ್ರದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಮಾರಾಟ, ಸರಗಳ್ಳತನ, ದರೋಡೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗಷ್ಟೇ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಅರಣ್ಯ ಪ್ರದೇಶದ ಚಾನಲ್ ಏರಿಯಾದ ಸಮೀಪ ಜೂಜಾಟದಲ್ಲಿ ತೊಡಗಿದ್ದ ಗುಂಪನ್ನು ದ್ರೋಣ್ ಕ್ಯಾಮರಾ ಹಾರಿಸುವ ಮೂಲಕ ಖಚಿತಪಡಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸರು, 19 ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ನಗರದ ಕೋಟೆಗಂಗೂರು ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯವ್ಯಸನಿಗಳ ಹಾವಳಿಯ ಬಗ್ಗೆ 112 ಸಹಾಯವಾಣಿಗೆ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಡ್ರೋನ್ ಮೂಲಕ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದೆ ಕೇವಲ ದೊಡ್ಡ ಮೆರವಣಿಗೆಗಳಿಗೆ ಮಾತ್ರ ಬಳಸಲಾಗುತ್ತಿದ್ದ ಡ್ರೋನ್ಗಳನ್ನು ಈಗ ನಗರದ ಹೊರವಲಯದ ಅಕ್ರಮಗಳನ್ನು ತಡೆಗಟ್ಟಲು ಬಳಸಲಾಗುತ್ತಿದೆ.

ಇಡೀ ಜಿಲ್ಲೆಯಾದ್ಯಂತ ಒಟ್ಟು 30,104 ಸಿಸಿಟಿವಿ ಕ್ಯಾಮರಾಗಳಿದ್ದು, ಕೇವಲ ಶಿವಮೊಗ್ಗ ನಗರವೊಂದರಲ್ಲೇ 20,356 ಜಿಯೋ ಟ್ಯಾಗ್ ಆಧಾರಿತ ಕ್ಯಾಮರಾಗಳು ಸಕ್ರಿಯವಾಗಿವೆ. ಈ ಆತ್ಯಾಧುನಿಕ ತಂತ್ರಜ್ಞಾನದಿಂದ ಅಪರಾಧ ನಡೆದ ನಿಖರ ಸ್ಥಳದ ಮಾಹಿತಿ ಪೊಲೀಸರಿಗೆ ಲಭ್ಯವಾಗಲಿದ್ದು, ತಕ್ಷಣವೇ ಅಲ್ಲಿಗೆ ಧಾವಿಸಲು ನೆರವಾಗುತ್ತಿದೆ. ಜಿಲ್ಲೆಯ ಎಲ್ಲಾ ಕ್ಯಾಮರಾಗಳು ಸುಸ್ಥಿತಿಯಲ್ಲಿದ್ದು, ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಕೂಡಲೇ 112 ಸಂಖ್ಯೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ತಿಳಿಸಿದ್ದಾರೆ. ಸಾರ್ವಜನಿಕರ ಸಹಕಾರವಿದ್ದಲ್ಲಿ ಡ್ರೋನ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

High-Tech Drone & CCTV Vigil to Curb Crime

High-Tech Drone & CCTV Vigil to Curb Crime
High-Tech Drone & CCTV Vigil to Curb Crime