ಕಾಲು ಮುರಿದು ರಸ್ತೆಯಲ್ಲಿಯೇ ಎಳೆದಾಡಿ, ಮೈಮೇಲೆ ಹತ್ತಿ ಕುಣಿದ ಆಸಾಮಿ! ಹರಿದಾಡುತ್ತಿರುವ ವಿಡಿಯೋದ ಪೂರ್ಣ ವಿವರ!

ಹಂಚಿಕೊಳ್ಳಿ
WhatsApp Facebook X Telegram
Brutal Iron Rod Attack on Road in Garthenekere Full Details of Viral Video
Brutal Iron Rod Attack on Road in Garthenekere Full Details of Viral Video

Garthenekere / ಮಲೆನಾಡು ಟುಡೆ ಸುದ್ದಿ / ಹೊಸನಗರ / ತಾಲ್ಲೂಕಿನಲ್ಲಿ ಆಗಾಗ ವಿಚಿತ್ರ ಹಾಗೂ ಅಷ್ಟೆ ಭೀಕರ ಅನ್ನುವಂತಹ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ನಿನ್ನೆ ದಿನ ಭಾನುವಾರವೂ ಅಂತಹದ್ದೊಂದು ಘಟನೆ ಬಗ್ಗೆ ವರದಿಯಾಗಿದ್ದು, ಘಟನೆಯ ದೃಶ್ಯ ಸಹ ಶಿವಮೊಗ್ಗ ಜಿಲ್ಲೆ ತುಂಬಾ ಹರಿದಾಡುತ್ತಿದೆ. ಏನಿದು ವಿಡಿಯೋ ! ಘಟನೆ ಎಂತದ್ದು! ನಡೆದಿದ್ದೇನು ಎಂಬಿತ್ಯಾದಿ ವಿವರ ನಮ್ಮ ಸ್ಥಳೀಯ ವರದಿಗಾರ ನೀಡಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

ವಿಷಯಕ್ಕೂ ಮೊದಲು ಹರಿದಾಡುತ್ತಿರುವ ದೃಶ್ಯದಲ್ಲಿ ಏನಿದೆ ಎಂಬುದನ್ನು ಗಮನಿಸುವುದಾದರೆ, 1 ನಿಮಿಷ 26 ಸೆಕೆಂಡುಗಳ ವಿಡಿಯೋದಲ್ಲಿ ಕತ್ತಲಲ್ಲಿ ನಡುರಸ್ತೆಯ ಮೇಲೆ ವ್ಯಕ್ತಿಯೊಬ್ಬನ ಹಲ್ಲೆ ಮಾಡ್ತಿರುವ ದೃಶ್ಯ ಸೆರೆಯಾಗಿವೆ. ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ ವ್ಯಕ್ತಿಯೊಬ್ಬ, ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿರುವ ಮತ್ತೊಬ್ಬ ವ್ಯಕ್ತಿಯ ಮೇಲೆ ಉದ್ದವಾದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸುತ್ತಿರುವುದು ರೆಕಾರ್ಡ್ ಆಗಿದೆ.

ಅಷ್ಟೆ ಅಲ್ಲದೆ ಹಲ್ಲೆಕೋರ ಗಾಯಾಳುವಿನ ಮೇಲೆ ಕಾಲಿಟ್ಟು ನಿಂತು, ಕರ್ನಾಟಕ ಪೊಲೀಸ್ ಪವರ್ ತೋರಿಸ್ತೀನಿ, ಆಂಧ್ರದಿಂದ ಬಂದು ಕರ್ನಾಟಕದಲ್ಲಿ ಕದೀತೀರಾ ಅಂತಾ ಹೇಳುತ್ತಿರುವಂಥೆ ಕಾಣುತ್ತಿದೆ. ಗಾಯಾಳುವಿನ ಜೀನ್ಸ್ ಪ್ಯಾಂಟ್ ಮೇಲೆ ರಕ್ತದ ಹರಿಯುತ್ತಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಇನ್ನೂ ಸ್ಥಳದಲ್ಲಿದ್ದ ದಾರಿಹೋಕರು ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನ ಚಿತ್ರೀಕರಿಸುತ್ತಾ, ಜಗಳವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಏ ಅಣ್ಣಾ, ಯಾವ್ ತರಹ ಇದು ಮಾಡಿದ್ದೀಯ ಅಣ್ಣಾ ನೀನು, ಹೊಟ್ಟೆಗೆ ಅನ್ನ ತಿನ್ನಲ್ವಾ ನೀನು, ಕೇಸ್ ಆಗುತ್ತೆ ಅಣ್ಣಾ ಎಂದು ಬಿಡಿಸಲು ನೋಡುತ್ತಾರೆ. ಆದರೆ, ಸಾರ್ವಜನಿಕರ ಮಾತಿಗೆ, ಯಾವುದೇ ಅಂಜಿಕೆಯಿಲ್ಲದೆ, ಕೇಸ್ ಆದ್ರೆ ಆಗಲಿ, ನಾನು ಜೈಲಿಗೆ ಹೋಗ್ತೀನಿ ಎಂದು ಉದ್ಧಟತನ ತೋರುತ್ತಾನೆ. ಮನುಷ್ಯತ್ವಾನೇ ಇಲ್ವಾ, ಯಾರಣ್ಣ ಇವನು, ಏನಕ್ಕೆ ಹಿಂಗೆ ಹೊಡಿತಾ ಇದ್ದೀರಾ ಎಂದು ಕೇಳಿದರೂ ಲೆಕ್ಕಿಸದ ಆತ, ವಿಕೃತಿ ಮೆರೆಯುವುದನ್ನು ಮುಂದುವರಿಸಿದ್ದು, ದೃಶ್ಯದಲ್ಲಿದೆ

ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲೊಂದು ಕಾರು ಹೋಗುತ್ತದೆ. ಕಾರಿನ ಬೆಳಕು ಕಂಡು ಗಾಬರಿಯಾದ ಸಾರ್ವಜನಿಕರು ಕಾರು ಬರ್ತಾ ಇದೆ, ನಾವು ಅಡ್ಡ ಬರಲಿಲ್ಲ ಅಂದರೆ ಕಾರು ಹತ್ತುತ್ತೆ ಎಂದು ಕೂಗಿಕೊಳ್ಳುತ್ತಾರೆ. ಅಷ್ಟರಲ್ಲಿ ಕಾರು ಚಾಲಕ ಸೈಡಿಗೆ ತೆಗೆದುಕೊಂಡು ಮುಂದಕ್ಕೆ ಹೋಗುತ್ತಾನೆ. ಕಾರು ಹೋದ ತಕ್ಷಣ ಹಲ್ಲೆಕೋರ, ಕೆಳಕ್ಕೆ ಬಿದ್ದವನನ್ನ ಧರಧರ ರಸ್ತೆಯ ಬದಿಗೆ ಎಳೆದುಕೊಂಡು ಹೋದ. ಸಾರ್ವಜನಿಕರು ಕಾಲು ಬಿಡೋ ಮಾರಾಯ, ಕಾಲು ಬಿಡಾ ಎಂದು ಪದೇ ಪದೇ ಕೂಗಿಕೊಳ್ಳುತ್ತಿದ್ದರೂ, ಆತ ಯಾವುದಕ್ಕೂ ಕಿವಿಗೊಡದೆ ಅಮಾನವೀಯವಾಗಿ ವರ್ತಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಮಂಜುನಾಥ್ ಎಂಬವರು ಹಲ್ಲೆಗೊಳಲಾಗಿದ್ದು, ಗರ್ತಿಕೆರೆ ಗ್ರಾಮದ ರಾಘವೇಂದ್ರ ಎಂಬಾತನೇ ಹಲ್ಲೆ ನಡೆಸಿದ ಆರೋಪಿ ಆಗಿದ್ಧಾನೆ. ಈತನನ್ನು ಪೊಲೀಸರು ಅರೆಸ್ಟ್ ಸಹ ಮಾಡಿದ್ದಾರೆ.

ಮಂಜುನಾಥ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗಾಯಾಳುವಿನ ಸಂಬಂಧಿಕರು, ಆರೋಪಿ ರಘು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿರುವ ರಘು, ಮಂಜುನಾಥ್ ಅವರನ್ನು ಮನೆಗೆ ಬಿಟ್ಟುಬರುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಮೋಸದಿಂದ ಈ ಕೃತ್ಯ ಎಸಗಿದ್ದಾನೆ ಎಂದಿದ್ದಾರೆ.

ಆರೋಪಿ ರಘು ರೌಡಿಸಂ ಪ್ರವೃತ್ತಿಯನ್ನು ಹೊಂದಿದ್ದು, ಉದ್ದೇಶಪೂರ್ವಕವಾಗಿಯೇ ಮಂಜುನಾಥ್ ಅವರಿಗೆ ವಿಕೃತಿ ಮೆರೆದಿದ್ದಾನೆ. ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ಕಾಲುಗಳಿಗೆ ಮನಬಂದಂತೆ ಹೊಡೆದು, ಅಮಾನವೀಯವಾಗಿ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಊರಿನಲ್ಲಿಯೂ ಆತ ಇದೇ ರೀತಿ ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡುತ್ತಿರುತ್ತಾನೆ. ಈ ಹಿಂದೆಯೂ ಇಂತಹ ಕೃತ್ಯಗಳನ್ನು ಎಸಗಿದ್ದಾನೆ. ರೌಡಿ ಪ್ರವೃತ್ತಿಯ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಲೇಬೇಕು ಹಾಗೂ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾದ ಮಂಜುನಾಥ್ ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಅತ್ಯಂತ ಗಂಭೀರವಾಗಿದೆ. ಕಬ್ಬಿಣದ ರಾಡ್‌ನಿಂದ ನಿರಂತರವಾಗಿ ಬಲವಾಗಿ ಹೊಡೆದ ಪರಿಣಾಮ ಅವರ ಎರಡೂ ಕಾಲುಗಳು ಫ್ರ್ಯಾಕ್ಚರ್ ಆಗಿವೆ. ದೇಹದ ಎಲ್ಲಾ ಕಡೆಗಳಲ್ಲಿಯೂ ರಾಡ್‌ನಿಂದ ಹಲ್ಲೆ ಮಾಡಲಾಗಿದ್ದು, ಅವರು ತೀವ್ರ ನೋವಿನಿಂದ ನರಳುತ್ತಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಮಂಜುನಾಥ್​ರನ್ನ ದಾಖಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor