ಶಿವಮೊಗ್ಗ : ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದೇ ಬೇರೆ, ಬಂದಿದ್ದೇ ಬೇರೆ: ಫ್ಲಿಪ್‌ಕಾರ್ಟ್‌ಗೆ  ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ಹಂಚಿಕೊಳ್ಳಿ
WhatsApp Facebook X Telegram
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ :ಆನ್‌ಲೈನ್ ಗ್ರಾಹಕ ಸೇವಾ ಲೋಪಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಗ್ರಾಹಕರು ಬುಕ್ ಮಾಡಿದ ಟೈರ್ ಬದಲಾಗಿ ಬೇರೆ ಮಾದರಿಯ ಟೈರ್ ಕಳುಹಿಸಿಕೊಟ್ಟು ಸೇವಾ ನ್ಯೂನ್ಯತೆ ಎಸಗಿದ ಫ್ಲಿಪ್‌ಕಾರ್ಟ್ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. 

ಶಿವಮೊಗ್ಗದ ಸಭಾ ಭವನ ರಸ್ತೆಯ ನೌಷಾದ್ ಮಂಜಿಲ್ ನಿವಾಸಿ ಮಹಬೂಬ್ ಮುದಾಸಿರ್ ಸಿ.ಎ. ಅವರು 2025ರ ಸೆಪ್ಟೆಂಬರ್ 12 ರಂದು ಫ್ಲಿಪ್‌ಕಾರ್ಟ್ ಮೂಲಕ ರೂ. 2,211/- ನೀಡಿ ‘GOOD YEAR KELLY 74T VFM2, 145/80/R12’ ಟೈರ್ ಅನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ಬುಕ್ ಮಾಡಿದ್ದರು. ಆದರೆ, ಸೆಪ್ಟೆಂಬರ್ 19ರಂದು ಸಂಸ್ಥೆಯು ಬುಕ್ ಮಾಡಿದ ಟೈರ್ ಬದಲಿಗೆ ಕಡಿಮೆ ಬೆಲೆಯ ‘GOOD YEAR KELLY 74S VFM2, 145/80/R12’ ಟೈರ್ ಅನ್ನು ತಲುಪಿಸಿತ್ತು. 

ಇದನ್ನು ಗಮನಿಸಿದ ಗ್ರಾಹಕರು ತಪ್ಪಾಗಿ ಬಂದ ಟೈರ್ ವಾಪಸ್ ಕಳುಹಿಸಿ, ಬುಕ್ ಮಾಡಿದ ಸರಿಯಾದ ಟೈರ್ ನೀಡುವಂತೆ ಕೋರಿದ್ದರು. ಆದರೆ, ಎದುರುದಾರರು ಮತ್ತೆ ಅದೇ ತಪ್ಪಾದ 74S ಟೈರ್ ಅನ್ನೇ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಇ-ಮೇಲ್ ಹಾಗೂ ಲೀಗಲ್ ನೋಟೀಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ, ಗ್ರಾಹಕರು ನ್ಯಾಯಕ್ಕಾಗಿ ಶಿವಮೊಗ್ಗ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. 

ದೂರುದಾರರು ಸಲ್ಲಿಸಿದ ದಾಖಲೆಗಳು ಹಾಗೂ ವಾದ-ವಿವಾದಗಳನ್ನು ಆಲಿಸಿದ ಆಯೋಗವು, ಆನ್‌ಲೈನ್ ಕಂಪನಿಯು ಬೇರೆ ಟೈರ್ ಕಳುಹಿಸಿ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಆಯೋಗದ ಅಧ್ಯಕ್ಷರಾದ  ಟಿ.ಶಿವಣ್ಣ ಹಾಗೂ ಸದಸ್ಯರಾದ  ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ: 

ಟೈರ್ ಬೆಲೆ ರೂ. 2,211/- ಅನ್ನು ದಿನಾಂಕ: 04/10/2025 ರಿಂದ ಶೇ. 9ರ ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಪಾವತಿಸಬೇಕು. ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಕಿರುಕುಳಕ್ಕಾಗಿ ರೂ. 25,000/- ಪರಿಹಾರ ನೀಡಬೇಕು. ದೂರಿನ ಖರ್ಚು ವೆಚ್ಚವಾಗಿ ರೂ. 10,000/- ಪಾವತಿಸಬೇಕು. ಈ ಆದೇಶವಾದ 45 ದಿನಗಳ ಒಳಗೆ ಮೊತ್ತವನ್ನು ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಒಟ್ಟು ಮೊತ್ತಕ್ಕೆ ಶೇ. 12ರಷ್ಟು ವಾರ್ಷಿಕ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಸಿದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor