SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 ಹರಿದಾಡುತ್ತಾ ಮನೆಯೊಳಗೆ ಬಂದ ಹಾವಿನ ಮರಿಯೊಂದು ಬೂಟಿನೊಳಗೆ ಅಡಗಿ ಕುಳಿತು ಆತಂಕ ಮೂಡಿಸಿದ ಘಟನೆ ಬಗ್ಗೆ ಶಿವಮೊಗ್ಗ ಸಿಟಿಯಲ್ಲಿ ವರದಿಯಾಗಿದೆ.
ಸ್ನೇಕ್ ಕಿರಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಅವರಿಗೆ ಬಂದ ಮಾಹಿತಿ ಪ್ರಕಾರ, ನಗರದ ನಿವಾಸಿಯೊಬ್ಬರ ಮನೆಯೊಂದರಲ್ಲಿ ಆಭರಣದ ಹಾವಿನ ಮರಿಯೊಂದು, ಚಪ್ಪಲಿ ಸ್ಟಾಂಡ್ನಲ್ಲಿದ್ದ ಶೂನೊಳಗೆ ಪತ್ತೆಯಾಗಿದೆ.

ಮೊದಲು ಹಾವಿನ ಮರಿಯೊಂದು ಬಾಗಿಲು ದಾಟಿಕೊಂಡು ಹರಿದಾಡುತ್ತಾ ಮನೆಯೊಳಗೆ ಬರುತ್ತಿರುವುದನ್ನ ಕುಟುಂಬಸ್ಥರು ಗಮನಿಸಿದ್ದಾರೆ. ಆನಂತರ ಅದನ್ನ ಓಡಿಸಲು ಸಹ ಪ್ರಯತ್ನಕ್ಕೆ ಮುಂದಾಗಿದ್ದು, ಅಪಾಯ ಅರಿತು ಸುಮ್ಮನಾಗಿದ್ದಾರೆ. ಅಷ್ಟರಲ್ಲಿ ಹಾವಿನ ಮರಿ ಚಪ್ಪಲಿ ಸ್ಟ್ಯಾಂಡ್ನೊಳಗೆ ಹೋಗಿ ಅವಿತು ಕುಳಿತಿದೆ. ಇದರಿಂದ ಭಯಗೊಂಡ ಕುಟುಂಬಸ್ಥರು ಉರಗ ಸಂರಕ್ಷಕ ಸ್ನೇಕ್ ಕಿರಣ್ಗೆ ಕರೆ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ಚಪ್ಪಲಿ ಹಾಗೂ ಶೂಗಳನ್ನ ಕೂಲಂಕುಶವಾಗಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಆಭರಣದ ಹಾವಿನ ಮರಿ ಶೂ ಒಂದರಲ್ಲಿ ಪತ್ತೆಯಾಗಿದೆ. ಅದನ್ನು ಸುರಕ್ಷಿತವಾಗಿ ಹಿಡಿದ ಸ್ನೇಕ್ ಕಿರಣ್ ಸುರಕ್ಷಿತ ಸ್ಥಳದಲ್ಲಿ ಅದನ್ನು ಬಿಟ್ಟು ಬಂದಿದ್ದಾರೆ.