ಮಲೆನಾಡುಟುಡೆ ಸುದ್ದಿ / ರಿಪ್ಪನ್ ಪೇಟೆ : ರಿಪ್ಪನ್ಪೇಟೆ ಸಮೀಪದ ಮೂಗೂಡ್ತಿ ಭಾಗದಲ್ಲಿ ವಾಹನದಿಂದ ಜಾರಿ ಬಿದ್ದ ಕರುವೊಂದನ್ನು ದಾರಿಯುದ್ದಕ್ಕೂ ರಸ್ತೆಯಲ್ಲೇ ಎಳೆದೊಯ್ದ ಘಟನೆ ವರದಿಯಾಗಿದ್ದು ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ರಿಪ್ಪನ್ ಪೇಟೆ ಘಟನೆ ವಿವರ
ಶಿವಮೊಗ್ಗದಿಂದ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ನಾಲ್ಕು ಹಸುಗಳು ಹಾಗೂ ಒಂದು ಕರುವನ್ನು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಕರು ಆಯತಪ್ಪಿ ವಾಹನದಿಂದ ಕೆಳಗೆ ಬಿದ್ದಿದೆ. ಆದರೆ ಕರುವಿನ ಕತ್ತಿನ ಹಗ್ಗವು ವಾಹನಕ್ಕೆ ಸಿಲುಕಿಕೊಂಡಿದ್ದರಿಂದ, ಅದನ್ನು ಗಮನಿಸದ ಚಾಲಕ ಒಂದೂವರೆ ಕಿಲೋಮೀಟರ್ಗೂ ಹೆಚ್ಚು ದೂರ ರಸ್ತೆಯಲ್ಲೇ ಎಳೆದುಕೊಂಡು ಹೋಗಿದ್ದಾನೆ.
ಟಾರ್ ರಸ್ತೆಯಲ್ಲೇ ಎಳೆದೊಯ್ದ ಪರಿಣಾಮ ಕರುವಿನ ದೇಹದ ಚರ್ಮ ಸುಲಿದು ಹೋಗಿದ್ದು, ರಕ್ತಸ್ರಾವ ಉಂಟಾಗಿದೆ. ಈ ದೃಶ್ಯವನ್ನು ಕಂಡ ರಸ್ತೆಬದಿಯ ಜನರು ತಕ್ಷಣವೇ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಚಾಲಕ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಸ್ಥಳೀಯರು ತಕ್ಷಣವೇ ಪಶು ವೈದ್ಯಕೀಯ ಸಿಬ್ಬಂದಿ ಶರತ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿ, ಗಾಯಗೊಂಡ ಕರುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು. ಪ್ರಸ್ತುತ ಕರುವನ್ನು ಹೆಚ್ಚಿನ ಚಿಕಿತ್ಸೆಗೆ ರಿಪ್ಪನ್ಪೇಟೆ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಾಹನವನ್ನು ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
