ಶಿವಮೊಗ್ಗ : ಲಯನ್ ಸಫಾರಿಯಲ್ಲಿ ದಶಮಿಯ ಸಾವು ..ಚಾಮುಂಡಿಯ ವಂಶದ ಕುಡಿಗಳು ಇನ್ನು ನೆನಪು ಮಾತ್ರ….ಜೆಪಿ ಬರೆಯುತ್ತಾರೆ.

ಹಂಚಿಕೊಳ್ಳಿ
WhatsApp Facebook X Telegram
ತ್ಯಾವರೆಕೊಪ್ಪದಲ್ಲಿನ ಚಾಮುಂಡಿ ಹುಲಿಯ ಚಿತ್ರ, ಮಲೆನಾಡು ಟುಡೆ
ತ್ಯಾವರೆಕೊಪ್ಪದಲ್ಲಿನ ಚಾಮುಂಡಿ ಹುಲಿಯ ಚಿತ್ರ, ಮಲೆನಾಡು ಟುಡೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಅವಳಿ ಹುಲಿಗಳಾಗಿ ಜನಿಸಿದ್ದ  ವಿಜಯ ಮತ್ತು ದಶಮಿ ಇನ್ನು ನೆನಪು ಮಾತ್ರ. ಕಳೆದ ತಿಂಗಳಷ್ಟೆ ವಿಜಯ ಹೆಣ್ಣು ಹುಲಿ ಸಾವನ್ನಪ್ಪಿದರೆ, 06-09-26 ರಂದು ಸಂಜೆ ದಶಮಿ  ಹೆಣ್ಣು ಹುಲಿ ಸಾವನ್ನಪ್ಪಿದೆ. 2009 ರಲ್ಲಿ ಚಾಮುಂಡಿ ಹುಲಿ ವಿಜಯ ದಶಮಿ ಅವಳಿ ಹೆಣ್ಣು ಹುಲಿಗಳ ಜನ್ಮ ನೀಡಿತ್ತು. ಹೀಗಾಗಿ ಸಫಾರಿಯಲ್ಲಿ ಈ ಹುಲಿಗಳನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ದಶಮಿಗೆ ದಿಢೀರನೆ ಪಾರ್ಶ್ವವಾಯು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಳೆದ 10 ದಿನಗಳಿಂದ ದಶಮಿ ಹುಲಿಗೆ ಮೃಗಾಲಯದ  ವೈದ್ಯ ಸಿಬ್ಬಂದಿ ನಿರಂತರ ಚಿಕಿತ್ಸೆ ನೀಡುತ್ತಿದ್ದರು. ಆದರೆ, ದೈಹಿಕ ಬಲಹೀನತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ದಶಮಿ ಸಾವನ್ನಪ್ಪಿದೆ. 

ವಯೋಸಹಜ ಮತ್ತು ಅನಾರೋಗ್ಯದಿಂದ ಹುಲಿಗಳ ಸಾವು

ಸಫಾರಿಯಲ್ಲಿರುವ ಹುಲಿಗಳ ಜೀವಿತಾವಧಿ ಅಬ್ಬಬ್ಬಾ ಎಂದರೂ 15 ರಿಂದ 17 ವರ್ಷ ಎಂದು ಅಂದಾಜಿಸಲಾಗಿದೆ.ಆದರೆ ತ್ಯಾವರೆಕೊಪ್ಪ ಧಾಮದಲ್ಲಿ ಹುಲಿಗಳಿಗೆ ಆರೈಕೆ ಉತ್ತಮವಾಗಿರುವುದರಿಂದ ಹುಲಿಗಳು 17 ವರ್ಷಕ್ಕೂ ಅಧಿಕ ಕಾಲ ಜೀವಿಸಿ ದಾಖಲೆ ಬರೆದಿದೆ.ದೇಶದ ಇತಿಹಾಸದಲ್ಲಿಯೇ ಸಫಾರಿಯಲ್ಲಿ ದೀರ್ಘಕಾಲ ಬಾಳಿದ ಕೃತಿಕ ಹುಲಿ ತ್ಯಾವರೆಕೊಪ್ಪ ಹುಲಿಸಿಂಹಧಾಮದ ಹಿರಿಮೆ ಎಂದರೂ ತಪ್ಪಾಗಲಾರದು.ಕೃತಿಕಾ 19 ವರ್ಷ 6 ತಿಂಗಳ ಕಾಲ ಜೀವಿಸಿತ್ತು. 2015 ರಲ್ಲಿ ಸಫಾರಿಯಲ್ಲಿಯೇ ಹುಟ್ಟಿದ ಲವಕುಶ ಅವಳಿ ಗಂಡು ಹುಲಿಗಳು 14 ವರ್ಷಗಳ ಕಾಲ ಬದುಕಿದ್ದು ನಂತರ ಆರೋಗ್ಯ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದವು.   2020 ರಲ್ಲಿ ಸಾವನ್ನಪ್ಪಿದ ಭರತ ಗಂಡು ಹುಲಿಗೆ 16 ವರ್ಷ ವಯಸ್ಸಾಗಿದ್ದರೆ,ವಾಲಿ ಗಂಡುಹುಲಿಗೆ 18 ವರ್ಷ ವಯಸ್ಸಾಗಿತ್ತು. 17 ವರ್ಷದ ವಿಜಯ್ ಹುಲಿ ಫೆಬ್ರವರಿ 2025 ರಲ್ಲಿ ಸಾವನ್ನಪ್ಪಿದರೆ ದಶಮಿ ಈಗ ಸಾವನ್ನಪ್ಪಿದೆ.

08-10-13 ಚಾಮುಂಡಿ ಹುಲಿ ಸಾವು                                                         

ತ್ಯಾವರೆಕೊಪ್ಪ ಹುಲಿಸಿಂಹಧಾಮದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಚಾಮುಂಡಿ ಹೆಣ್ಣು ಹುಲಿ 08-10-13 ರಂದು  ಸಾವನ್ನಪ್ಪಿದೆ.19 ವರ್ಷದ ಚಾಮುಂಡಿಗೆ ವಯಸ್ಸಾಗಿದ್ದು,ಅನಾರೋಗ್ಯದಿಂದ ಬಳಲುತ್ತಿತ್ತು.ಬದುಕಿನ ಕೊನೆ ದಿನಗಳಲ್ಲಿ ಪ್ಯಾರಲಿಸಿಸ್ ಆದ ಹಿನ್ನಲೆಯಲ್ಲಿ ವನ್ಯಜೀವಿ ವೈದ್ಯರು ಹೆಚ್ಚಿನ ನಿಗಾವಹಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಾಮುಂಡಿ ಸಾವನ್ನಪ್ಪಿತು. 1993 ರಲ್ಲಿ ಸಿಂಹಧಾಮದಲ್ಲೇ ಹುಟ್ಟಿದ್ದ ಚಾಮುಂಡಿ ಬದುಕಿನುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸಿ,ಸಫಾರಿಯ ಆರ್ಥಿಕ ಹೊರೆಯನ್ನು ಕುಗ್ಗಿಸಿತ್ತು

ಚಾಮುಂಡಿಯ ಮಗಳಾಗಿ ಹುಟ್ಟಿದ ಕೃತಿಕ.

ಅಂದ ಹಾಗೆ ಕೃತಿಕ ಹುಟ್ಟಿದ್ದು 28-01-1997 ರಲ್ಲಿ..,ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಜನ್ಮತಾಳಿತು.ಕೃತಿಕಾ ಹುಟ್ಟಿನಿಂದ ಸಾಯುವವರೆಗೆ ಆಕೆ ಜನ್ಮ ನೀಡಿದ್ದು ಬರೋಬ್ಬರಿ ಎಂಟು ಹುಲಿ ಮರಿಗಳಿಗೆ.ಸಪಾರಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಲು ಕೃತಿಕಳ ಪಾತ್ರ ಅತೀ ದೊಡ್ಡದಾಗಿದೆ.ಹುಟ್ಟಿನಿಂದ ಸಾಯುವ ಕೊನೆ ಘಳಿಗೆ ವರೆಗೆ ಕೃತಿಕ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಕೃತಿಕಾ ಸಾವಿನ ನಂತರ ತಾಯಿಯ ಆಯಸ್ಸಿನ ದಾಖಲೆ ಮುರಿಯಲು ಹನುಮ ಸಜ್ಜಾಗಿದ್ದ. ಆದರೆ ಅದು ಸಾಧ್ಯವಾಗದೆ ಹನುಮ ಹುಲಿ ಸಾವನ್ನಪ್ಪಿತು. ಜನವರಿ 8 2025 ರಲ್ಲಿ ಅಂಜನಿ 17 ವರ್ಷ ಎಂಬ ಹೆಣ್ಣು ಹುಲಿ ಸಾವನ್ನಪ್ಪಿತ್ತು.ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಂಜನಿ 2022 ರಲ್ಲಿ ಮೈಸೂರಿನ ಕೂರ್ಗಡಿಯಲ್ಲಿ ಚಾಮುಂಡಿ ವನ್ಯಮೃಗ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ದಿಂದ ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ತರಲಾಗಿದೆ. 

ಹುಲಿಗಳ ನಡುವೆ ಕಾದಾಟದಿಂದಲೂ ಸಾವು                                                                     

(24-05-09) ಕಳೆದ 17 ವರ್ಷದ ಹಿಂದೆ ತ್ಯಾವರೆಕೊಪ್ಪ ಹುಲಿಸಿಂಹ ಧಾಮದಲ್ಲಿ ಎರಡು ಹುಲಿಗಳ ನಡುವೆ  ಕಾದಾಟ ನಡೆದಿತ್ತು. ಗಂಡು ಮತ್ತು ಹೆಣ್ಣು ಹುಲಿಯ ಕಾದಾಟದಲ್ಲಿ ತುಂಗಾ ಎಂಬ  ಹೆಣ್ಣುಹುಲಿ ಮೃತಪಟ್ಟಿತ್ತು. ಸಪಾರಿಯಲ್ಲಿ, ವಾಲಿ ಎಂಬ ಗಂಡುಹುಲಿಯು ತುಂಗಾ ಹೆಣ್ಣು ಹುಲಿಯೊಂದಿಗೆ ಕಾದಾಟಕ್ಕಿಳಿದಿತ್ತು. ತುಂಗಾಗೆ 10 ವರ್ಷ 8 ತಿಂಗಳಾಗಿದ್ದು,ತೀವೃ ಅನಾರೋಗ್ಯದಿಂದ ಬಳಲುತ್ತಿತ್ತು.

2019-20 ರಲ್ಲಿ  ಮೂರು ಗಂಡು ಹುಲಿಗಳ ಸಾವು, ವಾಲಿ, ಭರತ, ರಾಮ ಹನುಮನ  ಸಾವು  

ಸಫಾರಿಯಲ್ಲಿ 2020-2022 ರ ಆಸುಪಾಸಿನಲ್ಲಿ ಸಿಂಹಧಾಮದಲ್ಲಿ  ಹುಲಿಗಳಾದ ವಾಲಿ, ಭರತ, ರಾಮ ಹನುಮ ಹುಲಿಗಳು ಅನಾರೋಗ್ಯ ಸಮಸ್ಯೆಯಿಂದ ಸರಣಿ ರೂಪದಲ್ಲಿ ಸಾವನ್ನಪ್ಪಿದ್ದವು. ವಾಲಿ ಹುಲಿ (2020 ಡಿಸೆಂಬರ್ 18) ರಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. 

ಭರತ (2022 ಸೆಪ್ಟೆಂಬರ್ 21) ಮತ್ತು ರಾಮ(2022 ಮೇ 11) ಅವಳಿ ಹುಲಿಗಳಾಗಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದೆ.ಒಟ್ಟಿನಲ್ಲಿ ಚಾಮುಂಡಿಗೆ ಹುಟ್ಟಿದ ಭರತ ವಾಲಿ ಹನುಮ ವಿಜಯ್ ಕೃತಿಕ ರಾಮ ಹುಲಿಗಳ ಸರಣಿ ಸಾವಾಗಿದ್ದು. ವಂಶದ ಕುಡಿ ಕಳಚಿದಂತಾಗಿದೆ. ಚಾಮುಂಡಿ ಮಕ್ಕಳ ವಂಶ ಕೊನೆಗೊಂಡಂತಾಗಿದೆ. 

ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ದೇಶವೇ ಬೆರಗಾಗುವಂತೆ ಅಭಿವೃದ್ಧಿಯಾಗುವತ್ತ ಸಾಗಿದೆ. ಹುಲಿಸಿಂಹಧಾಮದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಲಾಗಿದೆ.ಮೃಗಾಲಯದ ಇಡಿಯಾಗಿರುವ ಅಮರಕ್ಷರ್ ಡಿಸಿಎಫ್ ಸಫಾರಿಯನ್ನು ಪ್ರವಾಸಿತಾಣವನ್ನಾಗಿಸುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಿದ್ದಾರೆ. ಈಗ ವಿಜಯ ದಶಮಿ ಅವಳಿ ಹುಲಿಗಳ ಸಾವಾಗಿದೆ. ಸಧ್ಯ ಸಫಾರಿಯಲ್ಲಿ ಏಳು ಹುಲಿಗಳಿವೆ. ಇದರಲ್ಲಿ ಭದ್ರಾ ಮತ್ತು ಬಿಳಿ ಹುಲಿ ವಿಕ್ರಂ ಎಂಬ ಎರಡು ಗಂಡು ಹುಲಿಗಳು ಮತ್ತು ಪೂರ್ಣಿಮ ನಿವೇದಿತಾ ಸೀತಾ ಶ್ರಾವಣಿ ಮತ್ತು ರೋಹಿಣಿ ಎಂಬ ಹೆಣ್ಣು ಹುಲಿಗಳಿವೆ. ಬಿಳಿ ಹುಲಿ ವಿಕ್ರಂ ಸಧ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor