ವಾಮಾಚಾರದ ಹೆಸರಿನಲ್ಲಿ ಮಹಿಳೆಯಿಂದ 22 ಲಕ್ಷ ಮೌಲ್ಯದ ಆಭರಣ ಪಡೆದು ವಂಚನೆ, ಭದ್ರಾವತಿಯಲ್ಲಿ ಆರೋಪಿ ಬಲೆಗೆ

ಹಂಚಿಕೊಳ್ಳಿ
WhatsApp Facebook X Telegram
ವಾಮಾಚಾರ ಮಾಡಿರುವುದಾಗಿ ನಂಬಿಸಿ ಭದ್ರಾವತಿಯ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ವಾಮಾಚಾರ ಮಾಡಿರುವುದಾಗಿ ನಂಬಿಸಿ ಭದ್ರಾವತಿಯ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ:ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈ ಹಿಂದೆಲ್ಲ ಕೆಲಸ ಕೊಡಿಸುವುದಾಗಿ ಅಥವಾ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ವಂಚಿಸುತ್ತಿದ್ದರು. ಆದರೆ ಇದೀಗ ಬದಲಾದ ಕಾಲಮಾನದಲ್ಲಿ ವಂಚನೆಯ ವಿಧಗಳೂ ಬದಲಾಗಿವೆ. ಅದಕ್ಕೆ ನಿದರ್ಶನ ಎಂಬಂತೆ ಮಹಿಳೆಯೊಬ್ಬರಿಗೆ ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.

ಭದ್ರಾವತಿಯಲ್ಲಿ ಘಟನೆಯ ವಿವರ

ಘಟನೆಯ ವಿವರಗಳನ್ನು ನೋಡುವುದಾದರೆ, ಭದ್ರಾವತಿಯ ಗಾಂಧಿನಗರದ ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿಯಾಗಿರುವ ಮಹಿಳೆಗೆ ಮುರುಳಿ ಹಾಗೂ ಆತನ ಸಹೋದರ ರವಿ ಎಂಬ ವ್ಯಕ್ತಿಗಳ ಪರಿಚಯವಾಗಿತ್ತು. ಹೀಗೆ ಪರಿಚಯವಾಗಿದ್ದ ವೇಳೆ, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದ್ದು, ಅದನ್ನು ತೆಗೆಸದೇ ಹೋದರೆ ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ದೊಡ್ಡ ಮಟ್ಟದ ಸಮಸ್ಯೆಯಾಗಲಿದೆ ಎಂದು ಮಹಿಳೆಗೆ ರವಿ ಭಯ ಹುಟ್ಟಿಸಿದ್ದಾನೆ.

ಮಾಟ-ಮಂತ್ರ ಎಂದರೆ ಯಾರಿಗೆ ತಾನೇ ಭಯ ಇರುವುದಿಲ್ಲ ಹೇಳಿ? ಏನಾದರೂ ಅನಾಹುತವಾಗಬಹುದು ಎಂದು ಅಂಜಿದ ಮಹಿಳೆ, ಆರೋಪಿಗಳ ಬಳಿ ಪರಿಹಾರವನ್ನು ಕೇಳಿದ್ದಾರೆ. ಆಗ ಇದನ್ನೇ ದಾಳವನ್ನಾಗಿ ಮಾಡಿಕೊಂಡ ಆರೋಪಿಗಳು, ನಿಮ್ಮ ಮನೆಗೆ ಬಂದು ನಾವು ಪೂಜೆ ನಡೆಸಬೇಕು ಎಂದು ಹೇಳಿ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪೂಜೆ ಪೂರ್ಣಗೊಂಡ ಬಳಿಕ ತಮ್ಮ ಮನೆಗೆ ಬಂಗಾರದ ಒಡವೆಗಳನ್ನು ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ಹೇಳಿ ಮಹಿಳೆಯನ್ನು ನಂಬಿಸಿದ್ದಾರೆ.

ಇದನ್ನೆಲ್ಲ ನಂಬಿದ ಮಹಿಳೆ ಸುಮಾರು 193 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಆದರೆ ಯಾವಾಗ ಹಣ ಮತ್ತು ಬಂಗಾರ ಸಿಕ್ಕಿತೋ, ಆಗ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ. ಇದರಿಂದ ತಮಗೆ ಮೋಸ ಹೋಗಿರುವುದು ಅರಿತ ಮಹಿಳೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಭದ್ರಾವತಿ ತಿಪ್ಲಾಪುರ ಕ್ಯಾಂಪ್ ನಿವಾಸಿ ಮುರುಳಿ ಅಲಿಯಾಸ್ ಕರಿಯ (31) ಎಂಬಾತನನ್ನು ಬಂಧಿಸಿದ್ದಾರೆ. ಹಾಗೆಯೇ, ಆರೋಪಿಯಿಂದ ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ್ದ ಚಿನ್ನ ಹಾಗೂ ಕರಗಿಸಿ ಗಟ್ಟಿಯಾಗಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿದ್ದ, ಒಟ್ಟು ಸುಮಾರು 22.50 ಲಕ್ಷ ರೂಪಾಯಿ ಮೌಲ್ಯದ 161 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor