ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / (Accident at Ripponpet) ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದೆ. ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ತಲೆಗೆ ಬಿದ್ದ ಪರಿಣಾಮ ದೈಹಿಕ ಶಿಕ್ಷಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಿಪ್ಪನ್‌ಪೇಟೆ ಪಟ್ಟಣದ ಮೇರಿಮಾತಾ ಶಾಲೆಯ ದೈಹಿಕ ಶಿಕ್ಷಕ ಕಮಲಾಕರ್ ಎಂದು ಗುರುತಿಸಲಾಗಿದೆ.
ವಲಯ ಮಟ್ಟದ ಕ್ರೀಡಾಕೂಟದ ಅಂಗವಾಗಿ ಡಿಸ್ಕಸ್ ಥ್ರೋ ಸ್ಪರ್ಧೆ ನಡೆಯುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಡಿಸ್ಕಸ್ ಎಸೆದಾಗ ಅದು ಆಕಸ್ಮಿಕವಾಗಿ ಫೀಲ್ಡ್ ನಲ್ಲಿದ್ದ ಶಿಕ್ಷಕ ಕಮಲಾಕರ್ ತಲೆಗೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಲೆನಾಡು ಟುಡೆಗೆ ಸ್ಥಳೀಯ ವರದಿಗಾರರಾದ ರಫಿ ರಿಪ್ಪನ್‌ಪೇಟೆ ತಿಳಿಸಿದ್ದಾರೆ.
