ಮಲೆನಾಡು ಟುಡೆ ಸುದ್ದಿ / ಕುಂಸಿ (Kumsi) / ಯುವತಿಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯ, ಖಾಸಗಿ ಚಿತ್ರಗಳನ್ನು ಬಳಸಿಕೊಂಡು ಹಣಕ್ಕೆ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಶಿವಮೊಗ್ಗದ ಪೊಲೀಸ್ ಠಾಣೆ ಒಂದರ ಇಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುಂಸಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಂದೆ , ತಾಯಿ ಮತ್ತು ಸಹೋದರಿ ವಿರುದ್ಧವೂ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆ ಒಂದರ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಸಂಬಂಧ ಉಲ್ಲೇಖವಾಗಿರುವ ಎಫ್ಐಆರ್ನಂತೆ ಘಟನೆಯನ್ನ ವಿವರಿಸುವುದಾದರೆ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನ ಪತ್ತೆಮಾಡಿ ಬಂಧಿಸುವಂತೆ ಇಬ್ಬರು ಪೊಲೀಸರಿಗೆ ಸೂಚಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಆರೋಪಿ ಬಂಧನಕ್ಕೆ ಕುಂಸಿ ಪೊಲೀಸ್ ಸ್ಟೇಷನ್ ಲಿಮಿಟ್ಸ್ಗೆ ಬಂದಿದ್ದರು. ಈ ವೇಳೆ ಕಾರೊಂದರಲ್ಲಿ ತೆರಳುತ್ತಿದ್ದ ಆರೋಪಿಯನ್ನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಆದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪಿ ಹಾಗೂ ಆತನ ಕುಟುಂಬಸ್ಥರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕುಂಸಿ ಪೊಲೀಸ್ ಸ್ಟೇಷನ್ ಸಿಬ್ಬಂದಿಯನ್ನು ಸಹ ತಳ್ಳಾಡಿದ್ದಾರೆ ಎಂದು ಆರೋಪಿಸಲಾಗಿದೆ.
