ಶಿವಮೊಗ್ಗ: ಮೆಗ್ಗಾನ್‌ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ: 6 ಕೋಟಿ ಅನುದಾನದ ಭರವಸೆ!

ಹಂಚಿಕೊಳ್ಳಿ
WhatsApp Facebook X Telegram
ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಮೆಗ್ಗಾನ್_ ಆಸ್ಪತರೆಗೆ ದಿಡೀರ್_ ಭೇಟಿ ನೀಡಿದರು
ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಮೆಗ್ಗಾನ್_ ಆಸ್ಪತರೆಗೆ ದಿಡೀರ್_ ಭೇಟಿ ನೀಡಿದರು

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಅತ್ಯಾಧುನಿಕ ಹೃದ್ರೋಗ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿಕಾರಿಪುರದಲ್ಲಿ ಕಾಂಗ್ರೆಸ್ ಯುವ ಘಟಕ ಆಯೋಜಿಸಿದ್ದ ಪಾದಯಾತ್ರೆಗೆ ತೆರಳುವ ಮಾರ್ಗಮಧ್ಯೆ ಆಸ್ಪತ್ರೆಗೆ ಆಗಮಿಸಿದ ಸಚಿವರು, ಅತ್ಯಾಧುನಿಕ ತಂತ್ರಜ್ಞಾನದ ನಾಲ್ಕು ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿ  ಹಾಗೂ ಕ್ಯಾಥ್‌ಲ್ಯಾಬ್ ವಿಭಾಗಗಳನ್ನು ವೀಕ್ಷಿಸಿದರು. ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡೀನ್ ಡಾ. ರಮೇಶ್ ಬಾಬು ಅವರು ಸಿಬ್ಬಂದಿ ಕೊರತೆ ಹಾಗೂ ಮಾಡ್ಯುಲರ್ ಓಟಿಗೆ ಉಪಕರಣ ಅಳವಡಿಸಲು ಬೇಕಿರುವ 6 ಕೋಟಿ ಅನುದಾನದ ಕುರಿತು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಜತೆಗೆ ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಮತ್ತು ಸರತಿ ಸಾಲಿನಲ್ಲಿ ನಿಲ್ಲಿಸದಂತೆ ಆಸ್ಪತ್ರೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು .

ಆಯನೂರು ಸರ್ಕಾರಿ ಶಾಲೆಗೂ ಸಚಿವರ ದಿಢೀರ್ ಭೇಟಿ 

ಈಸೂರಿಗೆ ತೆರಳುವ ಮಾರ್ಗಮಧ್ಯೆ ಶಿವಮೊಗ್ಗ ತಾಲೂಕಿನ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೂ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸರ್ಕಾರದಿಂದ ವಿತರಿಸಲಾಗಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟವನ್ನು ಸ್ವತಃ ಪರಿಶೀಲಿಸಿದರು. ಶೌಚಾಲಯ ದುರಸ್ತಿಗೆ ಮನವಿ ಮಾಡಿದ ವಿದ್ಯಾರ್ಥಿನಿಯ ಕೋರಿಕೆಗೆ ಸ್ಪಂದಿಸಿ, ನೈರ್ಮಲ್ಯ ಹಾಗೂ ಮೇಲ್ಚಾವಣಿ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor