ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ನಗರದ ಹೊಳೆ ಬಸ್ ನಿಲ್ದಾಣದ ಸಮೀಪವಿರುವ ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 18 ವರ್ಷದ ಯುವತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಗುರುವಾರ ಸಂಜೆ ಸುಮಾರು 6:15ರ ವೇಳೆಗೆ ಯುವತಿಯೊಬ್ಬಳು ಸೇತುವೆಯಿಂದ ಧುಮುಕಿರುವ ಕುರಿತು ಶಿವಮೊಗ್ಗ ಅಗ್ನಿಶಾಮಕ ಠಾಣೆಗೆ ತುರ್ತು ಮಾಹಿತಿ ಲಭಿಸಿತು. ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೊಬೈಲ್ ರೆಸ್ಕ್ಯೂ ವಾಹನದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು.
ನದಿಗೆ ಹಾರಿದ ಯುವತಿಯು ಸಂಪೂರ್ಣವಾಗಿ ಮುಳುಗಲಾಗದೆ ಈಜಿ ದಂಡೆಯ ಮೇಲೆ ಬಂದು ಕುಳಿತಿದ್ದಳು. ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ನದಿಗಿಳಿದು ಕಾರ್ಯಾಚರಣೆ ನಡೆಸಿ, ಆಕೆಯನ್ನು ಸುರಕ್ಷಿತವಾಗಿ ದಂಡೆಗೆ ಕರೆತಂದರು. ಈ ಘಟನೆಯಲ್ಲಿ ಯುವತಿಯ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಕ್ಷಿಸಲ್ಪಟ್ಟ ಯುವತಿಯನ್ನು ಅಗ್ನಿಶಾಮಕ ದಳದ DFO ಜೀಪ್‌ನಲ್ಲಿ ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆಗೆ ದಾಖಲಿಸಲಾಯಿತು. ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಶಿವಮೊಗ್ಗದ ಶರಾವತಿ ನಗರ 2ನೇ ಕ್ರಾಸ್, ಚೌಡಮ್ಮ ದೇವಸ್ಥಾನದ ಸಮೀಪದ ನಿವಾಸಿ ಗಿರೀಶ್ ಎಂಬುವವರ ಪುತ್ರಿ ಎಂದು ಗುರುತಿಸಲಾಗಿದೆ .
ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಯುವತಿ ಈ ನಿರ್ಧಾರ ಕೈಗೊಳ್ಳಲು ನಿಜವಾದ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
