ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಗಿತಕ್ಕೆ ಕಾರಣ ಯಾರು! ರಾಜ್ಯ ಸರ್ಕಾರ ಹೇಳಿದ್ದೇನು? ಸಚಿವ ಎಂಬಿ ಪಾಟೀಲ್ ಹೇಳೋದೇನು?

ಹಂಚಿಕೊಳ್ಳಿ
WhatsApp Facebook X Telegram
shivamogga airport
shivamogga airport

ಸುದ್ದಿಯ ಸ್ಥಳ: Shivamogga district, Karnataka

ಶಿವಮೊಗ್ಗ ವಿಮಾನ ನಿಲ್ದಾಣ ಬಂದ್ ಆಗುತ್ತಿರುವ ಬಗ್ಗೆ ಯಾರು ಸಹ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಬಂದ್ ಆಗೋದಕ್ಕೆ ಕಾರಣ ನೀನು ನೀನು ಎಂದು ಆರೋಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸಹ ಹೇಳಿಕೆ ನೀಡಿದ್ದು ಕೇಂದ್ರ ಸರ್ಕಾರವೇ ಎಲ್ಲದಕ್ಕೂ ಕಾರಣ ಎಂದಿದ್ದಾರೆ. ಉಡಾನ್ ಯೋಜನೆಯಡಿ ವಿಮಾನ ಸೇವೆಗಳನ್ನು ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನವಾಗಿ ವೆಚ್ಚ ಭರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಗಣಿಸದ ಪರಿಣಾಮ ದೇಶದ 17 ವಿಮಾನ ನಿಲ್ದಾಣಗಳಲ್ಲಿ ಸೇವೆ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗಾಗಿ ಸಮಗ್ರ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿರುವ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಅನುದಾನ, ವಯಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್), ಸಮರ್ಥ ಕಾರ್ಯಾಚರಣೆ ಸೇರಿದಂತೆ ವಿವಿಧ ಅಂಶಗಳನ್ನು ಹೊಸ ವಿಮಾನಯಾನ ನೀತಿಯಲ್ಲಿ ಒಳಗೊಳ್ಳಲಾಗಿದೆ. ಈ ನೀತಿಯು ದೇಶಕ್ಕೆ ಮಾದರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನ ಸೇವೆ ಸ್ಥಗಿತಗೊಂಡಿರುವ ವಿಚಾರ ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರದ ಉಡಾನ್-2 ಯೋಜನೆಯಲ್ಲಿನ ನೀತಿಗತ ದೋಷಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಉಡಾನ್ ಯೋಜನೆಯಡಿ ವಿಮಾನಯಾನ ಸೇವೆಗಳನ್ನು ಕೇವಲ ಆರಂಭಿಸುವುದಷ್ಟೇ ಅಲ್ಲದೆ, ಅವುಗಳನ್ನು ದೀರ್ಘಾವಧಿಗೆ ಮುಂದುವರಿಸಲು ಅಗತ್ಯವಾದ ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಡಾನ್ 3ರಿಂದ 5 ವರ್ಷಗಳ ಅವಧಿಯ ಯೋಜನೆಯನ್ನು ಇನ್ನೂ 5 ವರ್ಷಗಳಿಗೆ ವಿಸ್ತರಿಸಬೇಕು. ವಿಸ್ತರಿತ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ. 50ರಷ್ಟು ವೆಚ್ಚವನ್ನು ಭರಿಸಿ ವಿಮಾನ ಸೇವೆಗಳನ್ನು ಮುಂದುವರಿಸಿದರೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿತ್ತು ಎಂದು ವಿವರಿಸಿದರು.

ಆದರೆ, ರಾಜ್ಯ ಸರ್ಕಾರ ನೀಡಿದ್ದ ಈ ಸಲಹೆಗೆ ಕೇಂದ್ರ ಸರ್ಕಾರ ಬೆಲೆ ನೀಡಲಿಲ್ಲ. ಇದರ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿರುವ 17 ವಿಮಾನ ನಿಲ್ದಾಣಗಳಲ್ಲಿ ಸೇವೆ ಸ್ಥಗಿತಗೊಂಡಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು.ವಿಮಾನ ನಿಲ್ದಾಣಗಳ ನಿರ್ವಹಣೆ ಹಾಗೂ ಖಾಸಗೀಕರಣದ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಅವರಿಗೆ ನೀಡಲಾಗಿದೆ. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಖಾಸಗೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.ಕಲಬುರಗಿ ವಿಮಾನ ನಿಲ್ದಾಣದ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಮಾರು ₹1,000 ಕೋಟಿ ವೆಚ್ಚ ಮಾಡಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಿದೆ. ಆದರೆ, ಇದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಆದಾಯ ದೊರೆಯುತ್ತಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಹೆಚ್ಚಿನ ಹಣ ವೆಚ್ಚ ಮಾಡಿ ವಿಮಾನ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಿದರೂ, ಅದರ ಆರ್ಥಿಕ ಪ್ರಯೋಜನ ರಾಜ್ಯಕ್ಕೆ ದೊರೆಯುತ್ತಿಲ್ಲ ಎಂಬ ವಿಷಯವನ್ನು ಸಚಿವರು ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯದ ನಾಗರಿಕ ವಿಮಾನಯಾನ ಕ್ಷೇತ್ರದ ಸಮಗ್ರ ಅಭಿವೃದ್ಧಿ, ವಿಮಾನ ನಿಲ್ದಾಣಗಳ ನಿರ್ವಹಣೆ, ಅನುದಾನ ಹಾಗೂ ಕಾರ್ಯಾಚರಣೆಯ ಆರ್ಥಿಕ ಸಮರ್ಥತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿ ರೂಪಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಗೆ ಅನುಮೋದನೆ ಪಡೆಯುವ ಉದ್ದೇಶವಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor