ಶಿವಮೊಗ್ಗ : ಖಾಸಗಿ ಆಸ್ಪತ್ರೆಗಳಲ್ಲಿ  ಪಾರ್ಕಿಂಗ್​ ವ್ಯವಸ್ಥೆ ವಿಚಾರ, ಒಂದು ವಾರ ಗಡುವು, ಪ್ರತಿಭಟನೆಯ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
Shivamogga Private Hospital Parking Rules
Shivamogga Private Hospital Parking Rules

Shivamogga Private Hospital ಶಿವಮೊಗ್ಗ: ನಗರದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆದ್ದರಿಂದ ಮಹಾನಗರ ಪಾಲಿಕೆಯು ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಆಸ್ಪತ್ರೆಗಳಿಗೆ ಒಂದು ವಾರದ ಗಡುವು ನೀಡಬೇಕೆಂದು ಕರ್ನಾಟಕ ರಾಜ್ಯ ಮಹಾನಾಯಕ ಭೀಮರಾವ್ ಸಂಘರ್ಷ ಸಮಿತಿ ಆಗ್ರಹಿಸಿದೆ.

ಗುರುಪೂರ್ಣಿಮೆ ವಿಶೇಷ: ಶಿವಮೊಗ್ಗದ ದುರ್ಗಿಗುಡಿ ರಾಯರ ಮಠದಲ್ಲಿ ವಿಶೇಷ ಪೂಜೆ!

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಹರೀಶ್ ಮಾತನಾಡಿ, ಶಿವಮೊಗ್ಗದ ಅನೇಕ ಆಸ್ಪತ್ರೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಆಸ್ಪತ್ರೆಯ ಎದುರುಗಡೆ ವಾಹನಗಳನ್ನು ಪಾರ್ಕ್ ಮಾಡಿದರೆ ಸೆಕ್ಯೂರಿಟಿಯವರು ತಡೆಯುತ್ತಾರೆ. ಅಷ್ಟೇ ಅಲ್ಲದೆ, ಪೊಲೀಸರು ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದೇವೆ ಎಂದು ಫೈನ್ ಹಾಕುತ್ತಾರೆ. ನಾವು ಆಸ್ಪತ್ರೆಗೆ ರೋಗಿಗಳನ್ನು ನೋಡಿಕೊಳ್ಳಲು ಹೋಗಬೇಕೋ ಅಥವಾ ನಮ್ಮ ವಾಹನಗಳನ್ನು ಕಾಯುತ್ತ ಹೊರಗೆ ನಿಲ್ಲಬೇಕೋ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ಹಲವಾರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣ ಅನುಮತಿ ಪಡೆಯುವ ವೇಳೆ ಬೇಸ್‌ಮೆಂಟ್ ಅನ್ನು ಪಾರ್ಕಿಂಗ್‌ಗಾಗಿ ಮೀಸಲಿಡುವುದಾಗಿ ಯೋಜನೆ ಸಲ್ಲಿಸಿದ್ದವು. ಆದರೆ ಪ್ರಸ್ತುತ ಅನೇಕ ಆಸ್ಪತ್ರೆಗಳ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಪರಿಣಾಮವಾಗಿ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿದ್ದು, ಸಾರ್ವಜನಿಕರಿಗೆ, ರೋಗಿಗಳಿಗೆ ಹಾಗೂ ತುರ್ತು ಸೇವೆಗಳ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದು ಸಂಚಾರ ದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ಸಮಸ್ಯೆಗೂ ಕಾರಣವಾಗುತ್ತಿದೆ.

ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ತಕ್ಷಣವೇ ಎಲ್ಲಾ ಖಾಸಗಿ ಆಸ್ಪತ್ರೆಗಳ ಬೇಸ್‌ಮೆಂಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿರುವ ಆಸ್ಪತ್ರೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಬೇಕು. ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರು ಒಂದು ವಾರದ ಒಳಗಾಗಿ ಪ್ರತಿಯೊಂದು ಖಾಸಗಿ ಆಸ್ಪತ್ರೆಯಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿಸಬೇಕು. ಈ ಅವಧಿಯೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor