ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಕೆಲವು ದಿನಗಳಿಂದ ಸಿಟಿಯಲ್ಲಿನ ಪುಡ್ ಅಂಗಡಿಗಳ ಮೇಲೆ ಉಪ ವಿಭಾಗದ ಅಧಿಕಾರಿಗಳು ರೇಡ್ ನಡೆಸಿ, ತಪಾಸಣೆ ನಡೆಸಿದ್ದರು. ಈ ವೇಳೆ ಕೆಲವೊಂದು ಅಂಗಡಿಗಳ ಲೈಸೆನ್ಸ್ ರೆದ್ದು ಮಾಡಿದ್ದರು. ಇದೀಗ ಎಸಿ ಡಾ.ಮೈತ್ರಿ ನಗರದ ಹೊರವಲಯದ ಬುಳ್ಳಾಪುರದಲ್ಲಿರುವ ಅಡಿಕೆ ಸಂಸ್ಕರಣಾ ಘಟಕಕ್ಕೆ ಸಡನ್ ವಿಸಿಟ್ ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಅಡಿಕೆಗೆ ನಿಷೇಧಿತ ರಾಸಾಯನಿಕ ಬಣ್ಣ ಬಳಸುತ್ತಿರುವ ಕುರಿತು ದೂರು ಕೇಳಿಬರುತ್ತಿರುವ ಹಿನ್ನೆಲೆ, ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಲೆನಾಡು ಟುಡೆಗೆ ತಿಳಿಸಿದ್ದಾರೆ. ಮೇಲಾಗಿ ಕಾರ್ಯಾಚರಣೆಯ ಸಂದರ್ಭದಲ್ಲಿ ಕೃತಕ ಬಣ್ಣ ಬಳಕೆ ದೃಢಪಟ್ಟಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬುಳ್ಳಾಪುರದಲ್ಲಿರುವ ಘಟಕದಲ್ಲಿ ರೈತರಿಂದ ಅಡಿಕೆಯನ್ನ ಖರೀದಿಸಿ, ಸಂಸ್ಕರಿಸಿ, ದೊಡ್ಡ ಪ್ರಮಾಣದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹೊರರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಈ ಬಗ್ಗೆ ಮಾಹಿತಿ ಪಡೆದ ಡಾ.ಮೈತ್ರಿ ಅಡಿಕೆ ಸಂಸ್ಕರಣೆಯ ವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ ಅಡಿಕೆ ಗೋಡನ್ಗಳಲ್ಲಿ ಅಡಿಕೆಗೆ ನಿಷೇಧಿತ ಮತ್ತು ರಾಸಾಯನಿಕಯುಕ್ತ ಬಣ್ಣ ಬಳಸುತ್ತಿರುವ ಬಗ್ಗೆ ದೂರು ಬರುತ್ತಿವೆ. ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಅಂತಾ ತಿಳಿಸಿದ್ರು.
ಮಲ್ನಾಡ್ನಲ್ಲಿ ಕೆಲವರು ಕಣ್ಣಿಗೆ ರಾಚುವಂತೆ ಕಾಣುವ ಸಲುವಾಗಿ Rhodamine B ಮತ್ತು Sudan ಹೆಸರಿನ ಬಣ್ಣಗಳನ್ನ ಬಳಸ್ತಾರೆ ಎಂಬ ಆರೋಪವಿದೆ. ಕಳೆದ ಸೀಸನ್ನಲ್ಲಿ ಇದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸೀಜ್ ಆಗಿದ್ದವಷ್ಟೆ ಅಲ್ಲದೆ ಈ ವಿಚಾರ ದೊಡ್ಡಮಟ್ಟಿಗೆ ಸದ್ದುಮಾಡಿತ್ತು. ಇದೀಗ ಶಿವಮೊಗ್ಗ ಎಸಿ ಖುದ್ದಾಗಿ ಅಡಕೆ ಸಂಸ್ಕರಣ ಘಟಕಕ್ಕೆ ಭೇಟಿಕೊಟ್ಟು ವಾರ್ನಿಂಗ್ ಕೊಟ್ಟಿದ್ದಾರೆ.
ಮಲೆನಾಡು ಟುಡೆಗೆ ತಿಳಿಸಿರುವ ಮಾಹಿತಿ ಪ್ರಕಾರ, ರಾಸಾಯನಿಕ ಬಣ್ಣವು ಬಾಯಿ ಕ್ಯಾನ್ಸರ್, ಹೊಟ್ಟೆ ಹುಣ್ಣು, ಅಲರ್ಜಿ ಹಾಗೂ ಉಸಿರಾಟದ ತೊಂದರೆ ಉಂಟು ಮಾಡುತ್ತವೆ ಎನ್ನಲಾಗಿದೆ. ಅಡಕೆಯನ್ನ ಜಗಿಯುವ ಸಂದರ್ಭದಲ್ಲಿ ಈ ಬಣ್ಣವು ಬಾಯಿಯ ಲೋಳೆಪೊರೆಗೆ ಅಂಟಿಕೊಂಡು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಅಡಿಕೆಗೆ ರಸಾಯನಿಕಯುಕ್ತ ಬಣ್ಣ ಬಳಸುವುದನ್ನು ನಿರ್ಬಂಧಿಸಲಾಗಿದೆ.
ಇನ್ನೂ ಪರಿಶೀಲನೆಯ ಸಂದರ್ಭದಲ್ಲಿ ಘಟಕದಲ್ಲಿದ್ದ ಅಡಿಕೆಯ ಕೆಲವು ಮಾದರಿ ಸಂಗ್ರಹಿಸಿದ ಡಾ.ಮೈತ್ರಿ ಮತ್ತವರ ತಂಡ ರಾಸಾಯನಿಕ ಬಣ್ಣ ಬಳಸಿರುವುದು ಖಚಿತವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ನೀಡಿದ್ದಾರೆ. ಶಿವಮೊಗ್ಗ ಹೇಳಿಕೇಳಿ ಅಡಿಕೆ ಸಾಮ್ರಾಜ್ಯ, ವಾಣಿಜ್ಯ ಸಂಪತ್ತಿನ ಈ ಕೋಟೆಯಲ್ಲಿ ಡಾ.ಮೈತ್ರಿ ರಸಾಯಿನಿಕ ಬಣ್ಣ ಬೆರೆಸುವವರನ್ನು ಹುಡುಕಿಕೊಂಡು ಹೊರಟಿದ್ದಾರೆ. ಅವರ ಈ ಪರಿಶೀಲನಾ ದಾಳಿ ಮುಂದುವರಿಯಲಿ! ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜೀವ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ್, ಕೀರ್ತಿಕುಮಾರ್, ಶ್ರವಣಕುಮಾರ್, ಶ್ವೇತಾ, ಸುಮಾ ಮತ್ತು ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
