ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನಗರದ ಶಂಕರಮಠ ಸರ್ಕಲ್ ಹಾಗೂ ಹೊಳೆ ಬಸ್ ನಿಲ್ದಾಣಗಳ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೌದು ಪ್ರತಿದಿನ ಪೀಕ್ ಅವರ್ ಸಮಯದಲ್ಲಿ ಶಂಕರಮಠ ಸರ್ಕಲ್ ಹಾಗೂ ಹೊಳೆ ಬಸ್ ನಿಲ್ದಾಣಗಳ ಬಳಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಚಾರ ವಿಭಾಗವು ಪ್ರಮುಖ ಮೂರು ಬದಲಾವಣೆಗಳನ್ನು ಜಾರಿಗೆ ತಂದಿದೆ. ಶಂಕರಮಠ ಸರ್ಕಲ್ನ ಸಿಗ್ನಲ್ನಲ್ಲಿ ವಾಹನಗಳು ಬೇಗ ತೆರಳಲು ಅನುಕೂಲವಾಗುವಂತೆ ಫ್ರೀ ಲೆಫ್ಟ್ ಸಮಯವನ್ನು ಹೆಚ್ಚಿಸಲಾಗಿದೆ.
ಅಷ್ಟೇ ಅಲ್ಲದೆ, ಅದೇ ಶಂಕರಮಠ ಸರ್ಕಲ್ನ ಫುಟ್ಪಾತ್ನಲ್ಲಿ ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ವಿವಿಧ ಜಾಹೀರಾತು ಹಾಗೂ ಮಾಹಿತಿ ಬೋರ್ಡ್ಗಳನ್ನು ತೆರವುಗೊಳಿಸಲಾಗಿದೆ.
ಇನ್ನು ಹೊಳೆ ಬಸ್ ನಿಲ್ದಾಣದ ಬಳಿ ಸಿಟಿ ಬಸ್ಗಳು ಎಲ್ಲೆಂದರಲ್ಲಿ ನಿಲ್ಲುವುದನ್ನು ತಡೆಯಲು ಮತ್ತು ಬಸ್ಗಳು ನಿಗದಿತ ನಿಲ್ದಾಣದಲ್ಲೇ ಸರಿಯಾಗಿ ನಿಲ್ಲುವಂತೆ ಮಾಡಲು ಪ್ರತ್ಯೇಕ ಬಸ್ವೇ ನಿರ್ಮಿಸಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಪೊಲೀಸರು ಕೈಗೊಂಡಿರುವ ಈ ವ್ಯವಸ್ಥೆಗಳಿಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಕಡ್ಡಾಯವಾಗಿ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
