ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಪಾಲಿಗೆ ನುಂಗಲಾರದ ತುತ್ತಾಗಿರುವ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ಕುರಿತು ಚರ್ಚಿಸಲು ಕರೆಯಲಾಗಿರುವ ರಾಜ್ಯ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಲೆನಾಡಿನ ರೈತರ ಸಂಕಷ್ಟಗಳನ್ನು ಎಳೆಎಳೆಯಾಗಿ ಬೆಚ್ಚಿಟ್ಟಿದ್ದಾರೆ. ಈ ವಿಶೇಷ ಕಲಾಪವನ್ನು ಕರೆದಿದ್ದಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಶಿವಮೊಗ್ಗ ಜಿಲ್ಲೆಯ 1497 ಹಳ್ಳಿಗಳಿಗೆ ಮಾರಕವಾಗಲಿದ್ದು, ರೈತರು ತೀವ್ರ ಭೀತಿಗೊಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬ್ರಿಟಿಷರ ಕಾಲಕ್ಕಿಂತಲೂ ಘೋರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದು, ಮಲೆನಾಡಿನ ಜನರು ತಮ್ಮ ಜಮೀನುಗಳಲ್ಲಿ ಒಂದು ಕತ್ತಿ ಹಿಡಿದುಕೊಂಡು ಓಡಾಡಲಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಶರಾವತಿ, ಸಾವೆಹಕ್ಕು ಮತ್ತು ಮಾಣಿ ಆಣೆಕಟ್ಟುಗಳ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಸಮರ್ಪಕವಾಗಿ ಹಕ್ಕುಪತ್ರಗಳು ಸಿಕ್ಕಿಲ್ಲ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ 75 ವರ್ಷಗಳಿಂದ 25 ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡುವ ಆದೇಶಗಳಾಗಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ಶರಾವತಿ ಡ್ಯಾಂ ಸಮೀಪದ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಭೂಪಾಲ್ ದುರಂತದಂತಹ ಅನಾಹುತವನ್ನು ಇಲ್ಲಿ ತಂದೊಡ್ಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರುಗಂಭೀರ ಆರೋಪ ಮಾಡಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಕೈಬಿಡುವಂತೆ ಸೂಚಿಸಿದ್ದರೂ, ಮತ್ತೆ ಈ ಪ್ರಸ್ತಾಪ ಮುನ್ನೆಲೆಗೆ ಬಂದಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ ಎಂದರು.
ಮಲೆನಾಡಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ,
ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಕಾಡುಹಂದಿ, ಆನೆ, ಕಾಡುಕೋಣ ಹಾಗೂ ಮಂಗಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದ್ದು, ಪ್ರಾಣಿಗಳನ್ನು ಹೊಡೆಯಲು ಕಾನೂನಿನ ತೊಡಕುಗಳಿವೆ ಆಕ್ರೋಶ ವ್ಯಕ್ತಪಡಿಸಿದರು.ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸುವಾಗ ಸ್ಥಳೀಯರ, ಗ್ರಾಮ ಸಭೆಗಳ ಹಾಗೂ ಜನಪ್ರತಿನಿಧಿಗಳ ಯಾವುದೇ ಅಭಿಪ್ರಾಯಗಳನ್ನು ಸಂಗ್ರಹಿಸದೆ ಕೇವಲ ಉಪಗ್ರಹ ಆಧಾರಿತ ಸಮೀಕ್ಷೆಗಳ ಮೂಲಕ ವರದಿ ರೂಪಿಸಲಾಗಿದೆ. ಕೇರಳ ಸರ್ಕಾರವು ಈ ವರದಿಯನ್ನು ಯಾವ ರೀತಿ ವಿರೋಧಿಸಿ ತನ್ನ ರೈತರ ಹಿತ ಕಾಯ್ದುಕೊಂಡಿದೆಯೋ, ಆದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ದಿಟ್ಟ ಹೆಜ್ಜೆ ಇಡಬೇಕು ಎಂದು ಅವರು ಆಗ್ರಹಿಸಿದರು. ಕೇಂದ್ರ ಪರಿಸರ ಇಲಾಖೆ ನಡೆಸಿದ 11 ಸಭೆಗಳಲ್ಲಿ ರಾಜ್ಯದ ಸಂಸದರು ಮತ್ತು ಸಚಿವರು ಭಾಗವಹಿಸಿ ಆಕ್ಷೇಪಣೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೊಸನಗರ ಮತ್ತು ಸಾಗರದಲ್ಲಿ ರೈತರ ಹಿತರಕ್ಷಣೆಗಾಗಿ ಬೃಹತ್ ಪಾದಯಾತ್ರೆ ಹಾಗೂ ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ. ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯವನ್ನು ಈ ವಿಶೇಷ ಅಧಿವೇಶನದಲ್ಲಿ ಕೈಗೊಳ್ಳಬೇಕು. ಮಲೆನಾಡಿನ ರೈತರ ಜಮೀನು, ಮಕ್ಕಳ ಭವಿಷ್ಯ ಮತ್ತು ಪ್ರಾಣಿ ಸಂಕುಲದ ಉಳಿವಿಗೆ ಇದು ಅತ್ಯಂತ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಮಲೆನಾಡಿನ ರೈತರು ಸಾಮೂಹಿಕವಾಗಿ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಎಚ್ಚರಿಕೆ ನೀಡಿದರು ಹಾಗೂ ವಿರೋಧ ಪಕ್ಷದ ನಾಯಕರುಗಳೊಂದಿಗೆ ಸೇರಿ ದೆಹಲಿಗೆ ನಿಯೋಗ ತೆರಳುವ ಕುರಿತಂತೆಯೂ ಅವರು ಸಭೆಯಲ್ಲಿ ಮುಕ್ತವಾಗಿ ಚರ್ಚಿಸಿದರು.
