R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬೆನ್ನಲ್ಲೆ RM ಮಂಜುನಾಥ್ ಗೌಡರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ದಾಳಿ ಹಿನ್ನಲೆ ಏನು ? ದಾಳಿ ಏಕೆ ನಡೆಯಿತು ಎಂಬುದನ್ನು ನೋಡುವುದಾದರೆ, ಕಳೆದ ಜುಲೈ ತಿಂಗಳಿನಲ್ಲಿಯೇ ಇಡಿ, ಡಿಸಿಸಿ ಬ್ಯಾಂಕ್​ನ ಹಗರಣವೊಂದರ ಸಂಬಂಧ ವಿವರಣೆ ಪಡೆದಿತ್ತು. ಇವತ್ತಿನ ದಾಳಿ ಅದರ ಮುಂದುವರಿದ ಭಾಗ.. 

2014ರಲ್ಲಿ ಬೆಳಕಿಗೆ ಬಂದಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯ ಬಹುಕೋಟಿ ನಕಲಿ ಬಂಗಾರ ಸಾಲ ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್  ಕಾಯ್ದೆ  2003ರ ಸೆಕ್ಷನ್ 54ರಡಿ ಜಾರಿ ನಿರ್ದೇಶನಾಲಯ ನಕಲಿ ಬಂಗಾರ ಸಾಲ ಹಗರಣದ ತನಿಖೆಗೆ ಮುಂದಾಗಿದೆ.

62 ಕೋಟಿ ರೂಪಾಯಿ ಬಂಗಾರದ ಅಡಮಾನ ಸಾಲ ಪ್ರಕರಣ ಸಂಬಂಧ ಕಳೆದ ಜುಲೈನಲ್ಲಿಯೇ  ಜಾರಿನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಅಜಯ್ ಚೌದರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಮುಖ ಮಾಹಿತಿಗಳನ್ನ ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದರು. 

ಆ ವೇಳೆ ಶಿವಮೊಗ್ಗ ಡಿಸಿಸಿ ಬ್ಯಾಂಕ್​ ನಗರ ಶಾಖೆಗೆ ಸಂಬಂಧಿಸಿದ 2012 ರಿಂದ 2014 ರ ಅವಧಿಯ, 62 ಕೋಟಿ ರೂಪಾಯಿ ಬಂಗಾರ ಅಡಮಾನದ ಪ್ರಕರಣಕ್ಕೆ ಸಂಬಂಧಿಸಿದ  34 ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು,  ಹಗರಣ ನಡೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರೆಲ್ಲರ ಹೆಸರು, ವಿಳಾಸ, ಫೋನ್ ನಂ., ಈ-ಮೇಲ್ ಐಡಿ ಹಾಗೂ ಅವರುಗಳ ಜವಾಬ್ದಾರಿಯ  ವಿವರ ನೀಡುವಂತೆ ಸೂಚಿಸಲಾಗಿತ್ತು. 

ಅಲ್ಲದೆ ಸದರಿ ಅವಧಿಯಲ್ಲಿನ ಡಿಸಿಸಿ ಬ್ಯಾಂಕಿನ ಜನರಲ್ ಮ್ಯಾನೇಜರ್, ಉಪ ಮತ್ತು ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದವರು, ಶಾಖಾ ವ್ಯವಸ್ಥಾಪಕರು, ಸಿಇಒ, ಕ್ಯಾಷಿಯರ್, ಬಂಗಾರದ ವ್ಯಾಲ್ಯುಯರ್ ಆಗಿದ್ದವರ ಹೆಸರು, ವಿಳಾಸ, ಫೋನ್ ನಂ.,ಈ-ಮೇಲ್ ಐಡಿ, ಅವರುಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. 

ಇದಕ್ಕೂ ಮೊದಲು ಅಂದರೆ ಜಾರಿ ನಿರ್ದೇಶನಾಲಯ ಎಂಟ್ರಿಯಾಗುವುದಕ್ಕೂ ಮೊದಲು  ಡಿಸಿಸಿ ಬ್ಯಾಂಕ್ ನಲ್ಲಿ 2014 ರಲ್ಲಿ ನಡೆದಿರುವ 62 ಕೋಟಿ ರೂ. ಬಂಗಾರದ ಅಡಮಾನ ಸಾಲದ ಹಗರಣ ದೇಶದ ಗಮನ ಸೆಳೆದಿತ್ತು. ಚಿನ್ನವನ್ನೆ ಅಡಮಾನವಾಗಿ ಇಡದೇ ಹಾಗೂ ನಕಲಿ ಬಂಗಾರವನ್ನು ಅಡಮಾನವಾಗಿ ಇಟ್ಟು ಸಾಲ ನೀಡಿದ್ದ ಘಟನೆ ಬೆಳಕಿಗೆ ಬಂದಿತ್ತು.

ಈ ಸಂಬಂಧ  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲ ಡಿಸಿಸಿ ಎಂಡಿ ದೂರು ಕೊಟ್ಟಿದ್ದರು. ಆಗಿನ ಎಸ್​ಪಿ ಕೌಶಲೇಂದ್ರ ಕುಮಾರ್ ಈ ಪ್ರಕರಣ ವಿಶೇಷ ತಂಡ ರಚಿಸಿ 18  ಮಂದಿ ಬಂಧಿಸಿದ್ದರು. ನಂತರ ಪ್ರಕರಣ ಸಿಒಡಿಗೆ ತೆಕ್ಕೆಗೆ ಹೋಗಿದ್ದು, ಅಲ್ಲಿ ಕೆಲವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಇನ್ನೂ ಕೆಲವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿತ್ತು. 

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಇದೀಗ ಜಾರಿ ನಿರ್ದೇಶನಾಲಯ ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟಿದೆ.  ಕಳೆದ ವಾರವಷ್ಟೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು ಮಂಜುನಾಥ್ ಗೌಡರು. ವಾರ ಕಳೆಯುವಷ್ಟರಲ್ಲಿ ಇಡಿ ಇಲಾಖೆ ಇವತ್ತು ಅವರಿಗೆ ಶಾಕ್ ನೀಡಿದೆ.ಸುಮಾರು  5 ವಾಹನಗಳಲ್ಲಿ ಬಂದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಒಟ್ಟು ಒಂಬತ್ತು ಕಡೆಗಳಲ್ಲಿ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ತೆರಳಿದೆ. 

ಇನ್ನೊಂದೆಡೆ ಮಂಜುನಾಥ್ ಗೌಡರ ನಿವಾಸಗಳ ಮೇಲಿನ ದಾಳಿಯನ್ನು ಅವರ ಬೆಂಬಲಿಗರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

Leave a Comment