ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೀವರ ಸಮುದಾಯದ ಸಾಂಸ್ಕೃತಿಕ ಪರಂಪರೆ ಹಾಗೂ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೀವರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನವೆಂಬರ್ 24ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟದ ದೀವರ ಕಲೆಗಳ ಸ್ಪರ್ಧೆ ಆಯೋಜಿಸಲಾಗಿದೆ. ನಗರದ ಈಡಿಗರ ಭವನದಲ್ಲಿ ನಡೆಯಲಿರುವ ‘ದೀವರ ಸಂಸ್ಕೃತಿ ಸಂಗಮ’ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಕೋಲಾಟ, ಅಂಟಿಗೆ-ಪಿಂಟಿಗೆ ಹಾಗೂ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ದೀವರ ಸಮುದಾಯದ ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಲಾಪ್ರಕಾರದಲ್ಲಿ ಆಯ್ಕೆಯಾದ 4 ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ದೀವರ ಕಲಾ ಸ್ಪರ್ಧೆ ಪ್ರಮುಖ ಅಂಶಗಳು
- ಡೊಳ್ಳು ಕುಣಿತ ಮತ್ತು ಅಂಟಿಗೆ-ಪಿಂಟಿಗೆ (ಹಬ್ಬ ಹಾಡುವುದು) ಸ್ಪರ್ಧೆಗಳಲ್ಲಿ ಪುರುಷರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
- ಕೋಲಾಟ ಮತ್ತು ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಗಳಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.
- ಸ್ಪರ್ಧೆಗೆ ಆಗಮಿಸುವ ತಂಡಗಳಲ್ಲಿ ದೀವರ ಸಮಾಜದ ಸದಸ್ಯರು ಮಾತ್ರ ಇರಬೇಕು ಎಂಬ ನಿಯಮ ವಿಧಿಸಲಾಗಿದೆ.
- ಡೊಳ್ಳು ಕುಣಿತ, ಕೋಲಾಟ ಹಾಗೂ ಅಂಟಿಗೆ-ಪಿಂಟಿಗೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳಿಗೆ ₹10,000 ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ₹8,000 ನಗದು ಬಹುಮಾನ ನೀಡಲಾಗುವುದು.
- ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹6,000 ಹಾಗೂ ದ್ವಿತೀಯ ಬಹುಮಾನವಾಗಿ ₹4,000 ನೀಡಲಾಗುವುದು.ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
- ಹೊರ ತಾಲ್ಲೂಕುಗಳಿಂದ ಆಗಮಿಸುವ ಕಲಾ ತಂಡಗಳಿಗೆ ₹2,000 ಹಾಗೂ ಶಿವಮೊಗ್ಗ ತಾಲ್ಲೂಕಿನ ತಂಡಗಳಿಗೆ ₹1,000 ಪ್ರಯಾಣ ಭತ್ಯೆ ನೀಡಲಾಗುವುದು. ಸ್ಪರ್ಧೆಯಲ್ಲಿ ಪ್ರದರ್ಶನ ನೀಡುವ ಎಲ್ಲ ಕಲಾವಿದರಿಗೂ ಅಭಿನಂದನಾ ಪತ್ರ ವಿತರಿಸಲಾಗುವುದು.
- ಕಲಾ ತಂಡಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರದರ್ಶನ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಅದರೊಂದಿಗೆ ಕಲಾ ಪ್ರದರ್ಶನದಲ್ಲಿನ ಸೃಜನಶೀಲತೆಗೂ ಮಹತ್ವ ನೀಡಲಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ತಂಡಗಳು ನವೆಂಬರ್ 17ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳಾದ ಎಚ್. ನಾಗರಾಜ್ (9448438257), ಸುಧಾಕರ್ ಕೆ. ನಾಯ್ಕ (9902109016) ಅಥವಾ ಟಿ. ಕುಪ್ಪಯ್ಯ ದೊಣಂದೂರು (9448871602) ಅವರನ್ನು ಸಂಪರ್ಕಿಸಬಹುದು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಪುರಸ್ಕಾರ
ದೀವರ ಸಂಸ್ಕೃತಿ ಸಂಗಮ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ದೀವರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮಕ್ಕಳ ಪೈಕಿ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಪೂರ್ಣ ವಿಳಾಸದ ವಿವರಗಳೊಂದಿಗೆ ನವೆಂಬರ್ 17ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸಂಘ ತಿಳಿಸಿದೆ.
ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೆ.ಎಸ್. ಮಂಜಪ್ಪ (9449921957) ಅಥವಾ ಶ್ರೀನಿವಾಸ ಗೋಪಾಲ ನಾಯ್ಕ (9448724285) ಅವರನ್ನು ಸಂಪರ್ಕಿಸಬಹುದು ಎಂದು ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
