
ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಗೋವರ್ಧನ ಟ್ರಸ್ಟ್ ವತಿಯಿಂದ ನ.9ರಂದು ನಗರದ ನಾಲ್ಕು ಸ್ಥಳಗಳಲ್ಲಿ ದೀಪಾವಳಿ ಗೋಪೂಜೆ ಆಯೋಜಿಸಲಾಗಿದೆ ಎಂದು ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.



ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8ರಿಂದ 11ರವರೆಗೆ ಗೋಪೂಜೆ ನಡೆಯಲಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಸ್ವತಃ ಗೋಪೂಜೆ ಸಲ್ಲಿಸಲು ಅವಕಾಶವಿದ್ದು, ಯಾವುದೇ ಸೇವಾ ಶುಲ್ಕ ಇರುವುದಿಲ್ಲ ಎಂದರು.
ವಿನೋಬನಗರದ ಶಿವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಮಣ್ಯ ದೇವಸ್ಥಾನ, ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ. ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ ಉಪಸ್ಥಿತರಿರುವರು ಎಂದರು.

ಗೋವಿನ ರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಗೋಮಾತೆಯ ಆರಾಧನೆ ಮತ್ತು ಭಾರತೀಯ ಸಂಸ್ಕೃತಿಯ ಗೌರವದ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪಾಡ್ಯಮಿ ತಿಥಿ ಹಿನ್ನೆಲೆ, ಸೋಮವಾರವೇ ಗೋಪೂಜೆ
ದೀಪಾವಳಿ ಹಬ್ಬದ ಆಚರಣೆಯಲ್ಲಿ ತಿಥಿಗಳಿಗೆ ವಿಶೇಷ ಮಹತ್ವವಿದ್ದು, ಈ ಬಾರಿ ಪಾಡ್ಯಮಿ ತಿಥಿ ಹೆಚ್ಚಿನ ಅವಧಿ ಇರುವ ಹಿನ್ನೆಲೆಯಲ್ಲಿ ಸೋಮವಾರವೇ ಗೋಪೂಜೆ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.
ದೀಪಾವಳಿ ಆಚರಣೆಯ ಅಂಗವಾಗಿ ಶನಿವಾರ (ನ. 7)ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ. ಭಾನುವಾರ (ನ.8) ಬೆಳಿಗ್ಗೆ ಅಭ್ಯಂಗ ಸ್ನಾನ (ಎಣ್ಣೆ ಸ್ನಾನ) ಮಾಡಿ, ಸಂಜೆ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ. ಭಾನುವಾರ ಮಧ್ಯಾಹ್ನ 2.30ರ ನಂತರ ಅಮಾವಾಸ್ಯೆ ಆರಂಭವಾಗುವುದರಿಂದ ಸಂಜೆ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ ಎಂದು ವಿವರಿಸಿದರು.
ನ. 9ರ ಸೋಮವಾರ ಬೆಳಿಗ್ಗೆ 9 ಗಂಟೆಯವರೆಗೆ ಅಮಾವಾಸ್ಯೆ ತಿಥಿ ಇರಲಿದ್ದು, ಬೆಳಿಗ್ಗೆ 6.30ರಿಂದ 7 ಗಂಟೆಯ ಅವಧಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಬಹುದು. ಬಳಿಕ ಪಾಡ್ಯಮಿ ತಿಥಿ ಆರಂಭವಾಗಲಿದೆ. ಈ ತಿಥಿ 20 ಘಳಿಗೆಗಳಿಗಿಂತ ಹೆಚ್ಚು ಕಾಲ ಇರುವುದರಿಂದ ಸೋಮವಾರ ಗೋಪೂಜೆ ನಡೆಸುವುದು ಶಾಸ್ತ್ರೋಕ್ತವಾಗಿದೆ. ಮಂಗಳವಾರ (ನ. 10)ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಪಾಡ್ಯಮಿ ತಿಥಿ ಇರುವುದರಿಂದ ಸೋಮವಾರವೇ ಗೋಪೂಜೆಗೆ ಸೂಕ್ತ ದಿನವಾಗಿದೆ ಎಂದು ತಿಳಿಸಿದರು.

