ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿಯ ನೂತನ ಉಪಾಧ್ಯಕ್ಷರಾಗಿ ಜಿ.ಎನ್. ಸುಧೀರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ದಿನ ಶುಕ್ರವಾರ ನಡೆದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಂ. ಶ್ರೀಕಾಂತ್ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಸುಧೀರ್ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮವಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚುನಾವಣೆಯ ಹೈಲೆಟ್ಸ್
- ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದ ಎಸ್.ಕೆ. ಮರಿಯಪ್ಪ ಅವರು ಅಕ್ಟೋಬರ್ 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿತ್ತು. ಅದರಂತೆ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
- ಬ್ಯಾಂಕ್‌ನ ಹಾಲಿ ಅಧ್ಯಕ್ಷ ಮಂಜುನಾಥ ಗೌಡ ಅವರ ಸೂಚನೆಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್. ಸುಧೀರ್, ಎಂ. ಶ್ರೀಕಾಂತ್, ದುಗ್ಗಪ್ಪಗೌಡ ಹಾಗೂ ಸಿ. ಹನುಮಂತು ನಾಮಪತ್ರಗಳನ್ನು ಸಲ್ಲಿಸಿದ್ದರು. ಒಟ್ಟು 4 ಮಂದಿ ಚುನಾವಣಾ ಕಣಕ್ಕೆ ಪ್ರವೇಶಿಸಲು ನಾಮಪತ್ರ ಸಲ್ಲಿಸಿದ್ದರು.
- ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಡೆದ ಪರಿಶೀಲನೆಯಲ್ಲಿ ಸಿ. ಹನುಮಂತು ಮತ್ತು ದುಗ್ಗಪ್ಪಗೌಡ ಅವರ ನಾಮಪತ್ರಗಳು ತಿರಸ್ಕೃತಗೊಂಡವು. ಇದರಿಂದ ಜಿ.ಎನ್. ಸುಧೀರ್ ಹಾಗೂ ಎಂ. ಶ್ರೀಕಾಂತ್ ಮಾತ್ರ ಚುನಾವಣಾ ಕಣದಲ್ಲಿ ಉಳಿದಿದ್ದರು.
ಈ ನಡುವೆ ಎಂ. ಶ್ರೀಕಾಂತ್ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಪರಿಣಾಮವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್. ಸುಧೀರ್ ಒಬ್ಬರೇ ಅಭ್ಯರ್ಥಿಯಾಗಿ ಉಳಿದಿದ್ದು, ಅವರು ಅವಿರೋಧವಾಗಿ ಆಯ್ಕೆಯಾದರು.
