
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಓಡಾಡುವ ಪ್ರತಿಯೊಂದು ಆಟೋರಿಕ್ಷಾಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಈ ಸಂಬಂಧ ವಾರ್ತಾಇಲಾಖೆ ಮೂಲಕ ಪ್ರಕಟಣೆಯನ್ನ ಸಹ ನೀಡಿದೆ. ಇದರ ವಿವರ ಹೀಗಿದೆ.
ಆಟೋರಿಕ್ಷಾ ಚಾಲಕರು ಮೀಟರ್ ಬಳಸದೆ, ಜಾಸ್ತಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ದೂರು ವ್ಯಕ್ತವಾಗಿದ್ದವು. ಪ್ರಯಾಣಿಕರ ಈ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದೀಗ ಮೀಟರ್ ಅಳವಡಿಕೆಗೆ ಡೆಡ್ಲೈನ್ ಕೊಟ್ಟಿದ್ದಾರೆ.



ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆ / ಇಲಾಖೆ ಪ್ರಕಟಣೆಯ ಪ್ರಮುಖ ನಾಲ್ಕು ಅಂಶಗಳು
- ಶಿವಮೊಗ್ಗ ನಗರದಾದ್ಯಂತ ಸಂಚರಿಸುವ ಎಲ್ಲಾ ಆಟೋರಿಕ್ಷಾಗಳ ಮಾಲೀಕರು ಮತ್ತು ಚಾಲಕರು ಮುಂದಿನ 10 ದಿನಗಳ ಕಾಲಾವಕಾಶದ ಒಳಗಾಗಿ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಲೇಬೇಕು
- ಅಲ್ಲದೆ, ಪ್ರಯಾಣಿಕರಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿಗದಿಪಡಿಸಿರುವ ನಿರ್ದಿಷ್ಟ ದರವನ್ನು ಮಾತ್ರವೇ ಬಾಡಿಗೆಯಾಗಿ ಪಡೆಯಬೇಕು ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
- ಒಂದು ವೇಳೆ ಆಟೋರಿಕ್ಷಾ ಚಾಲಕರು ಮೀಟರ್ ಹಾಕಲು ನಿರಾಕರಣೆ ಮಾಡಿದರೆ ಅಥವಾ ಮೀಟರ್ ಪ್ರಕಾರ ನಿಗದಿತ ಬಾಡಿಗೆ ಹಣವನ್ನು ಪಡೆಯದೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರೆ, ಪ್ರಯಾಣಿಕರು ತಕ್ಷಣವೇ ದೂರು ಸಲ್ಲಿಸಬಹುದಾಗಿದೆ.
- ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ಮೊಬೈಲ್ ಸಂಖ್ಯೆ 8277983404 ಅನ್ನು ಪ್ರಕಟಿಸಲಾಗಿದ್ದು, ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರುಗಳನ್ನು ದಾಖಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

