ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರೈತರ ಬೆಳೆಗಳಿಗೆ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ’ಯು ರೈತರಿಗೆ, ಅದರಲ್ಲೂ ಅಡಿಕೆ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ. ವಿಮಾ ಕಂಪನಿಗಳು ರೈತರಿಂದ ಹಣವನ್ನು ಕಟ್ಟಿಸಿಕೊಂಡು, ಅದಕ್ಕೆ ತಕ್ಕನಾದ ಪರಿಹಾರವನ್ನು ನೀಡದೆ ಕೋಟ್ಯಾಂತರ ರೂಪಾಯಿಗಳ ಅಕ್ರಮ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದು, ಅದರ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ಹೌದು, ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಫಸಲ್ ಬೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮುಖ್ಯ ಉದ್ದೇಶವೇ ಆಪತ್ತಿನ ಕಾಲದಲ್ಲಿ ರೈತರ ನಷ್ಟವನ್ನು ಭರಿಸಲು ಆರ್ಥಿಕ ಸಹಾಯ ಒದಗಿಸುವುದು. ಈ ವಿಮಾ ಕಂತಿನ ಮೊತ್ತವನ್ನು ರೈತರು ಇಂತಿಷ್ಟು ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಇಂತಿಷ್ಟು ಎಂದು ಹಂಚಿಕೊಂಡು ಪಾವತಿಸುತ್ತವೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದ ಒಟ್ಟು 13,690 ಹೆಕ್ಟೇರ್ ಭೂಪ್ರದೇಶ ಹೊಂದಿರುವ ಎಲ್ಲಾ ಅಡಿಕೆ ರೈತರು ನಿಯಮಿತವಾಗಿ ಕಂತಿನ ಹಣವನ್ನು ಪಾವತಿಸುತ್ತಿದ್ದಾರೆ. ಆದರೆ ಇಲ್ಲಿ ವಿಮಾ ಕಂಪನಿಗಳು ರೈತರು ಹಾಗೂ ಸರ್ಕಾರ ಕಟ್ಟಿದ ಹಣವನ್ನು ಪೂರ್ತಿಯಾಗಿ ಭರಿಸದೆ, ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ.
ವಿಮಾ ಕಂಪನಿಗಳಿಗೆ ಕಟ್ಟುವ ಹಣದಲ್ಲಿ ರೈತರ ಪಾಲೆಷ್ಟು? ಸರ್ಕಾರಗಳ ಪಾಲೆಷ್ಟು?
ನಿಯಮದ ಪ್ರಕಾರ ಫಸಲ್ ಬೀಮಾ ಯೋಜನೆ ಅಡಿ ಒಂದು ಗುಂಟೆಗೆ ರೈತರು 5 ಪರ್ಸೆಂಟ್ ಹಣವನ್ನು ಕಟ್ಟುತ್ತಾರೆ. ಅಂದರೆ ಅಡಿಕೆ ತೋಟವನ್ನು ಹೊಂದಿರುವ ರೈತರು ಒಂದು ಗುಂಟೆಗೆ 64 ರೂಪಾಯಿಯಂತೆ, ಒಂದು ಎಕರೆ ಪ್ರದೇಶಕ್ಕೆ 2,560 ರೂಪಾಯಿ ಹಣವನ್ನು ಪಾವತಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ಇದಕ್ಕೆ ರಾಜ್ಯ ಸರ್ಕಾರ 123 ರೂಪಾಯಿ ಹಾಗೂ ಕೇಂದ್ರ ಸರ್ಕಾರ 123 ರೂಪಾಯಿಯಂತೆ ಒಟ್ಟು ವಿಮಾ ಕಂಪನಿಗಳಿಗೆ ಒಂದು ಗುಂಟೆಗೆ 333 ರೂಪಾಯಿ ಹಣವನ್ನು ಪಾವತಿಸಲಾಗುತ್ತದೆ. ಆದರೆ ವಿಮಾ ಕಂಪನಿಗಳು ರೈತರು ಕಟ್ಟಿದ ಹಣವನ್ನು ಕೊಡುವುದು ಹಾಗಿರಲಿ, ಸರ್ಕಾರ ಪಾವತಿಸುವ ಹಣವನ್ನು ಸಹ ಸಮರ್ಪಕವಾಗಿ ನೀಡುತ್ತಿಲ್ಲ ಎಂಬುದು ರೈತರ ಗಂಭೀರ ಆರೋಪವಾಗಿದೆ.
ವಿಮಾ ಕಂಪನಿಗಳು ಹಣ ನೀಡಬೇಕೆಂದರೆ ಇರುವ ನಿಯಮಾವಳಿಗಳೇನು?
ವಿಮಾ ಕಂಪನಿಗಳು ಪರಿಹಾರ ನೀಡಬೇಕೆಂದರೆ ಒಂದೋ ಅತಿವೃಷ್ಟಿಯಾಗಬೇಕು ಇಲ್ಲವೇ ಅನಾವೃಷ್ಟಿಯಾಗಬೇಕು. ಆದರೆ ಸಾಗರ ಭಾಗದಲ್ಲಿ 2024-25ನೇ ಸಾಲಿನಲ್ಲಿ 3 ಸಾವಿರ ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಆಗ ಪರಿಹಾರ ಹಣ ಬರಲಿಲ್ಲ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ ಸಾಗರ ಮತ್ತು ಹೊಸನಗರ ಭಾಗದಲ್ಲಿ, ಸಾಗರದ ಕೇವಲ ಮೂರು ಪಂಚಾಯಿತಿ ವ್ಯಾಪ್ತಿಯಲ್ಲಿ 700 ರೂಪಾಯಿ ಬಂದಿತ್ತು. ಆದರೆ ಉಳಿದ ಭಾಗಗಳಿಗೆ 2, 3, 6, 64 ರೂಪಾಯಿ ಸೇರಿದಂತೆ 200 ರೂಪಾಯಿಯ ಒಳಗಡೆ ಅಷ್ಟೇ ಹಣ ಬಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.
2025-26ನೇ ಸಾಲಿನ ಬೆಳೆ ವಿಮೆ ಹಣ 4 ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದು, ಹೊಸನಗರ ಭಾಗದ ನಿಟ್ಟೂರಿಗೆ ಗುಂಟೆಗೆ 13 ರೂಪಾಯಿ ಬಂದಿದೆ. ಆದರೆ ಅದರಲ್ಲಿ ಅಕ್ಕಪಕ್ಕದಲ್ಲಿಯೇ ಇರುವ ತಂದೆ-ಮಗನ ಜಾಗದಲ್ಲಿ ತಂದೆಗೆ 13 ರೂಪಾಯಿ ಬಂದಿದ್ದರೆ, ಬೇರೆಯಾಗಿರುವ ಮಗನಿಗೆ 2 ರೂಪಾಯಿ ಬಂದಿದೆ! ಇದರಲ್ಲಿ ವಿಮಾ ಕಂಪನಿಗಳು ಹಾಗೂ ಮೇಲ್ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತದೆ. ಅಲ್ಲಿ 2025-26ನೇ ಸಾಲಿನಲ್ಲಿ (ಕಳೆದ ವರ್ಷ) 648 ರೂಪಾಯಿ ಬಂದಿತ್ತು, ಆದರೆ ಈ ಬಾರಿ ಗುಂಟೆಗೆ 15 ರೂಪಾಯಿ ಬಂದಿದೆ. ಕಳೆದ ಬಾರಿ 2024-25ರಲ್ಲಿ ಗುಂಟೆಗೆ 6 ರೂಪಾಯಿ ಬಂದಿದ್ದರೆ, ಈ ಬಾರಿ 63 ರೂಪಾಯಿ ಬಂದಿದೆ. ನಾವು ಕಟ್ಟಿದ ಹಣದ ಬಗ್ಗೆ ಕೇಳುತ್ತಿಲ್ಲ, ಸರ್ಕಾರ ನೀಡಿದ 123 ರೂಪಾಯಿ ಎಲ್ಲಿಗೆ ಹೋಗುತ್ತಿದೆ? ರೇನ್ ಗೇಜ್ (ಮಳೆ ಮಾಪನ) ಸರಿ ಇಲ್ಲದಿದ್ದರೆ ಯಾವ ಆಧಾರದಲ್ಲಿ ನೀವು ಲೆಕ್ಕ ಹಾಕುತ್ತೀರಾ ಎಂಬುದು ವಿಮಾ ಕಂಪನಿಗೆ ರೈತರು ಕೇಳುತ್ತಿರುವ ನೇರ ಪ್ರಶ್ನೆಯಾಗಿದೆ.
ಮುಂದಿನ ದಿನಗಳಲ್ಲಿ 700 ರೈತರಿಂದ ಗ್ರಾಹಕರ ನ್ಯಾಯಾಲಯದ ಮೊರೆ!
ರೈತರ ಪ್ರಕಾರ ಸಾಗರ-ಹೊಸನಗರ ಭಾಗದಲ್ಲಿ 2024-25ನೇ ಸಾಲಿನ ವಿಮಾ ಹಣ ಸರಿಯಾಗಿ ಬರಲೇ ಇಲ್ಲ. ಬಂದರೂ ಸಹ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬಂದಿದ್ದು, ನೀಡಿದ ಮೊತ್ತವೂ ತೀರಾ ಕಡಿಮೆಯಾಗಿದೆ. ಹಾಗಾಗಿ ಸುಮಾರು 700 ಜನ ರೈತರೆಲ್ಲರೂ ಸೇರಿ ಗ್ರಾಹಕರ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದಾರೆ. ಈಗಾಗಲೇ 300 ಜನ ರೈತರು ಗ್ರಾಹಕರ ಕೋರ್ಟ್‌ಗೆ ಅರ್ಜಿಸಲ್ಲಿಸಿದ್ದು, ಇನ್ನುಳಿದ 400 ಜನ ರೈತರು ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಲಿದ್ದಾರೆ. ಇದರ ನಡುವೆ, ಇದೇ ತಿಂಗಳ ಕೊನೆಯಲ್ಲಿ ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಈ ವಿಚಾರವಾಗಿ ನಮಗೆ ವಿಮಾ ಕಂಪನಿಗಳು ಬಹಳ ದೊಡ್ಡ ದ್ರೋಹ ಮಾಡುತ್ತಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ವಿಮಾ ಹಣ ಬಿಡುಗಡೆಯಾಗುತ್ತಿದೆ. ನಾವು ಕಟ್ಟಿರುವ ಹಣ ಬರದಿದ್ದರೂ ಪರವಾಗಿಲ್ಲ, ಸರ್ಕಾರ ಕಟ್ಟಿರುವ ಕೋಟ್ಯಾಂತರ ರೂಪಾಯಿ ಹಣ ಎಲ್ಲಿಗೆ ಹೋಗುತ್ತಿದೆ? ಇದರಲ್ಲಿ ವಿಮಾ ಕಂಪನಿಗಳು ಅಷ್ಟೇ ಅಲ್ಲದೆ ಮೇಲಾಧಿಕಾರಿಗಳ ಕೈವಾಡವೂ ಇದೆ. ಕೂಡಲೇ ನಮಗೆ ನಮ್ಮ ನ್ಯಾಯಯುತ ಹಣವನ್ನು ಬಿಡುಗಡೆ ಮಾಡಬೇಕು.
ವಾಶಂ ರಾಮಚಂದ್ರಭಟ್, ಅಧ್ಯಕ್ಷರು, ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರರ ಸಂಘ.
ವರದಿ : ಪ್ರತಾಪ್ ತೀರ್ಥಹಳ್ಳಿ
