ಅಹಿತಕರ ಘಟನೆ ಕಂಡುಬಂದರೆ 8277982900 ಈ ನಂಬರ್​ಗೆ ಮೆಸೆಜ್ ಕಳುಹಿಸಿ! ಎಸ್​ಪಿ ನಿಖಿಲ್​.ಬಿ ಸೂಚನೆ

ಹಂಚಿಕೊಳ್ಳಿ
WhatsApp Facebook X Telegram
ಅಹಿತಕರ ಘಟನೆ ಕಂಡುಬಂದರೆ 8277982900 ಈ ನಂಬರ್​ಗೆ ಮೆಸೆಜ್ ಕಳುಹಿಸಿ! ಎಸ್​ಪಿ ನಿಖಿಲ್​.ಬಿ ಸೂಚನೆ

ಮಲೆನಾಡು ಟುಡೆ ಸುದ್ದಿ / ಸಾಗರ / ತಾಲೂಕಿನಲ್ಲಿ ಗಾಂಜಾ ಸಾಗಣೆ ಮತ್ತು ಸೇವನೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಗಾಂಜಾ ಮಾರಾಟ, ಸಾಗಣೆ ಅಥವಾ ಸೇವನೆ ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದರು.

ಕಳೆದ ಗುರುವಾರ, ನಗರದ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಮತ್ತು ಗಣಪತಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಾಂಜಾಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡುವ ದೂರುಗಳು ಸಾಗರ ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಆ ದೂರುಗಳು ನೇರವಾಗಿ ಶಿವಮೊಗ್ಗದಲ್ಲಿರುವ ತಮ್ಮ ಕಚೇರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗಾಂಜಾ ಮಾರಾಟ ಮತ್ತು ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು,.

ಶಿವಮೊಗ್ಗದಲ್ಲಿ ಗಾಂಜಾ ಸೇವನೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ 2,000ಕ್ಕೂ ಹೆಚ್ಚು ದೂರು ಬಂದಿವೆ. ಗಾಂಜಾ ಮಾರಾಟದಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದ ಅವರು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಅಪರಾಧಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಈದ್ ಮಿಲಾದ್ ಮತ್ತು ಗಣಪತಿ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಲು ಎರಡೂ ಸಮುದಾಯಗಳ ಮುಖಂಡರು ಮತ್ತು ಸಾರ್ವಜನಿಕರು ಸಹಕರಿಸಬೇಕು. ಹಬ್ಬಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿರುವುದು ಕಂಡುಬಂದರೆ ತಕ್ಷಣ ಮೊಬೈಲ್ ಸಂಖ್ಯೆ 8277982900ಕ್ಕೆ ಸಂದೇಶ ಕಳುಹಿಸಿ ಮಾಹಿತಿ ನೀಡಿ ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor