ಎಸ್​ಐಆರ್​ ಬಗ್ಗೆ ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮಹತ್ವದ ಮಾತು!

This Article Written by / ajjimane ganesh / ಜುಲೈ 4, 2026

Ration Supply DC Warning to LPG, CNG Bunks in Shivamogga  Sagara Tehsildar Shimoga DC Update LPG Domestic Supply Stable

SIR in Shivamogga | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಒಂದುವೇಳೆ, ಬಿಎಲ್‌ಗಳು ನೀಡುವ ಅರ್ಜಿಯನ್ನು ವಾಪಸ್ ಅವರಿಗೆ ನೀಡದೇ ಹೋದರೆ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಲಿದೆ ಅಂತಾ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಪಷ್ಟಪಡಿಸಿದ್ದಾರೆ. ನಿನ್ನೆ ದಿನ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೋಟರ್ ಐಡಿಯಲ್ಲಿರುವ ವಿಳಾಸಕ್ಕೆ ಬಿಎಲ್‌ಗಳು ಮೂರು ಸಲ ಭೇಟಿ ನೀಡಿ, ಮತದಾರರು ಸಿಗದಿದ್ದರೆ ಅರ್ಜಿಗಳನ್ನು ಮನೆಯೊಳಗೆ ಹಾಕಿ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಒಳಗೊಂಡ ಪಿಂಕ್ ಚೀಟಿಯನ್ನು ಅಂಟಿಸಿ ಹೋಗುತ್ತಾರೆ. ಹಾಗಾಗಿ ಬಾಡಿಗೆದಾರರು ಮನೆ ಬದಲಿಸಿದ್ದರೆ, ಈ ಹಿಂದೆ ವಿಳಾಸದಲ್ಲಿರುವವರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ ಪ್ರಮು ಅಂಶಗಳು

ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇರದಿದ್ದರೆ ಪೋಷಕರು ಅಥವಾ ಅಜ್ಜಿ ಅಜ್ಜಿಯ ಹೆಸರಿದ್ದರೆ ಅದರ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ ನೀಡಬೇಕಾಗುತ್ತದೆ.

ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಗೈರು ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರಾದವರು ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿ ನೋಂದಣಿಯಾಗಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ

ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಪ್ರಯುಕ್ತ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಜು.29ರವರೆಗೆ ಮನೆಮನೆಗೆ ತೆರಳಿ ಗಣತಿ ನಮೂನೆಯನ್ನು ವಿತರಿಸಲಿದ್ದಾರೆ.

1,973 ಮತಗಟ್ಟೆಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈವರೆಗೆ 5,75,101 ನಮೂನೆಗಳನ್ನು ವಿತರಿಸಲಾಗಿದ್ದು, ಆ ಪೈಕಿ 11,248 ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲ ಮತದಾರರು ಗಣತಿ ನಮೂನೆಯನ್ನು ಸ್ವೀಕರಿಸಿದ ನಂತರ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು. ಗಣತಿ ನಮೂನೆಯನ್ನು ಭರ್ತಿ ಮಾಡಿ ನೀಡದೇ ಹೋದರೆ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ,

ಆದ್ದರಿಂದ ಎಲ್ಲ ಮತದಾರರು ನಿರ್ಲಕ್ಷ್ಯ ಮಾಡದೇ ಮತದಾರರ ಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಲು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು. ಅದರೊಂದಿಗೆ ಮತಗಟ್ಟೆ ಏಜೆಂಟರುಗಳೂ ಸಹ ಈ ನಮೂನೆಗಳನ್ನು ಸಂಗ್ರಹಿಸಿ, ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ

ಅಲ್ಲದೆ, ಬಿಎಲ್‌ಗಳು ನೀಡುವ ನಮೂನೆಯನ್ನು ಭರ್ತಿ ಮಾಡಿ ನೀಡಿದರೆ ಸಾಕು, ಯಾವುದೇ ದಾಖಲೆ ಒದಗಿಸುವ ಅಗತ್ಯವಿಲ್ಲ. ಅನುಮಾನಗಳಿದ್ದರೆ ಬಿಎಲ್‌ಗಳನ್ನು ಭೇಟಿ ಮಾಡಿ, ಟೋಲ್ ಫ್ರೀ ನಂ. 1950 ಸಂಪರ್ಕಿಸಿ. ಮ್ಯಾಪಿಂಗ್ ಆಗದ ಮತದಾರರು ಸರಕಾರ ಗುರುತಿಸಿದ 11 ದಾಖಲೆಗಳ ಪೈಕಿ ಒಂದನ್ನು ಒದಗಿಸಬಹುದು. ಆಗಸ್ಟ್‌ 5ರಂದು ಕರಡು ಮತದಾರರ ಪಟ್ಟಿ ಪ್ರಕಟ, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಕೆ, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಮನೆ ಭೇಟಿ ಸಂದರ್ಭದಲ್ಲಿ ಬಿಎಲ್‌ಒ ಜತೆ ಹೋಗಲು ಅವಕಾಶವಿದೆ , ಈ ವೇಳೆ ಹ್ಯಾಂಡ್ ಬಿಲ್ ವಿತರಿಸುವಂತಿಲ್ಲ, ಹಾಗೆಯೇ ಇಂತದ್ದೆ ಸ್ಥಳಕ್ಕೆ ಬನ್ನಿ ಎಂದು ಮತದಾರರನ್ನು ಕರೆಸುವಂತಿಲ್ಲ ಎಂದು ಅಂತಾ ಡಿಸಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಪ್ರತಿದಿನ ಪರಿಷ್ಕರಣೆ ಕಾರ್ಯದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳು, ಮೊಬೈಲ್‌ನಲ್ಲಿ ಹರಿದಾಡುವ ನಕಲಿ ಸಂದೇಶಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು. ಅಲ್ಲದೆ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಚುನಾವಣಾ ತಹಸೀಲ್ದಾರ್ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ, ಸಿಬ್ಬಂದಿ ಇದ್ದರು.

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

#ShivamoggaNews,shivamogga live,shivamogga today news,SIR in Shivamogga

ಮುಂದಿನ ಸುದ್ದಿ ಒದಿ