ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಸಮೀರ್ ಅಲಿಯಾಸ್ ಬಚ್ಚನ್‌ನನ್ನು ಹಿಡಿಯಲು ಬೆಂಗಳೂರು ಸಿಸಿಬಿ ಪೊಲೀಸರು ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಹೈಡ್ರಾಮವೊಂದು ನಡೆದಿದೆ. ಬಚ್ಚನ್ ಪೊಲೀಸರನ್ನು ಕಂಡು ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣವೊಂದರಲ್ಲಿ ಬಚ್ಚನ್‌ಗಾಗಿ ಬೆಂಗಳೂರು ಸಿಸಿಬಿ ಪೊಲೀಸರ ತಂಡ ಶಿವಮೊಗ್ಗಕ್ಕೆ ಆಗಮಿಸಿತ್ತು. ಈ ವೇಳೆ ಪೊಲೀಸರನ್ನು ಕಂಡ ಆರೋಪಿ, ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೊಟ್ಟೆಗೆ ಚಾಕು ಇರಿದುಕೊಂಡಿದ್ದಾನೆ ಎನ್ನಲಾಗಿದೆ. ಇದರಿಂದ ಸಿಸಿಬಿ ಕಾರ್ಯಾಚರಣೆ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸದ್ಯ ಗಾಯಗೊಂಡಿರುವ ಬಚ್ಚನ್ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಗೆ ಇರಿದುಕೊಂಡಿದ್ದ ಚಾಕು ದೇಹದಲ್ಲೇ ಉಳಿದಿರುವುದರಿಂದ ಅದನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಾಗಾಗಿ ಯಾರಿಗೂ ಪ್ರವೇಶ ಹಾಗೂ ಆಸ್ಪತ್ರೆಯಲ್ಲಿನ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ
