ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಗೋಪಾಳದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಅವರ ಮನೆಯಲ್ಲಿ ನಡೆದಿತ್ತು ಎನ್ನಲಾದ ₹11.35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮನೆಯಿಂದ ಕಳವಾಗಿವೆ ಎಂದು ಭಾವಿಸಲಾಗಿದ್ದ ಚಿನ್ನಾಭರಣಗಳು ಮನೆಯಲ್ಲಿಯೇ ಸುರಕ್ಷಿತವಾಗಿ ಪತ್ತೆಯಾಗಿವೆ. ಕಳ್ಳತನ ನಡೆದಿದೆ ಎಂಬ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಪರಿಶೀಲನೆಯ ವೇಳೆ ಆಭರಣಗಳು ಮನೆಯಲ್ಲೇ ಇರುವುದು ತಿಳಿದುಬಂದಿದೆ.
ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಮೇಘನಾ ಅವರು ಕುಟುಂಬ ಸಮೇತ ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ನವೆಂಬರ್ 8ರಂದು ಮನೆಯ ಲಾಕರ್ ಪರಿಶೀಲಿಸಿದಾಗ ಚಿನ್ನಾಭರಣಗಳು ಕಾಣಿಸದ ಹಿನ್ನೆಲೆಯಲ್ಲಿ ಕಳ್ಳತನದ ಅನುಮಾನ ವ್ಯಕ್ತವಾಗಿತ್ತು.
ಮನೆಯಲ್ಲಿದ್ದ ಚಿನ್ನದ ಸರ, ಬಳೆಗಳು, 10 ಚಿನ್ನದ ನಾಣ್ಯಗಳು ಹಾಗೂ ಬೆಳ್ಳಿಯ ಗಣೇಶನ ಮೂರ್ತಿ ಸೇರಿದಂತೆ ಒಟ್ಟು ₹11.35 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷವೆಂದರೆ, ಮನೆಯ ಬಾಗಿಲು, ಕಿಟಕಿ ಅಥವಾ ಲಾಕರ್‌ಗಳನ್ನು ಮುರಿದಿರುವ ಯಾವುದೇ ಕುರುಹುಗಳು ಕಂಡುಬಂದಿರಲಿಲ್ಲ. ಹೀಗಾಗಿ ಮನೆಯ ಬಗ್ಗೆ ಮಾಹಿತಿ ಹೊಂದಿರುವ ಪರಿಚಿತರೇ ಕೃತ್ಯ ಎಸಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿತ್ತು.
ದೂರು ದಾಖಲಿಸಿಕೊಂಡ ತುಂಗಾನಗರ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು. ಪೊಲೀಸರ ತನಿಖೆಯ ವೇಳೆ ಕಳವಾಗಿವೆ ಎಂದು ಭಾವಿಸಲಾಗಿದ್ದ ಚಿನ್ನಾಭರಣಗಳು ಮನೆಯಲ್ಲಿಯೇ ಪತ್ತೆಯಾಗಿದೆ. ಹಾಗಿದ್ದೂ ಈ ಸಂಬಂಧ ತನಿಖೆ ಮುಂದುವರಿದಿದೆ.
