ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಹಿಂದ ನಾಯಕನನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯದ ಕಮಲ್ ಮಹಲ್ನಲ್ಲಿ ನಡೆದಿದ್ದ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆ ಸಮಾರಂಭದ ವೇಳೆ ವೈರಲ್ ಆದ ಒಂದು ಫೋಟೋ. ಏನಿದು ವಿಚಾರ, ಯಾವುದದು ಫೋಟೋ, ಅದಕ್ಕೆ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಏನು ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಇತ್ತೀಚೆಗೆ ಅಂದರೆ ನವೆಂಬರ್ 16ರಂದು ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯದ ಕಮಲ್ ಮಹಲ್ನಲ್ಲಿ ಸೋನಿಯಾ ಗಾಂಧಿಯವರ ಆತ್ಮಕಥನ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು. ಅದಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತೆರಳಿದ್ದರು. ನಂತರ ಅವರು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದರು. ಆದರೆ ವಿಚಾರ ಶುರುವಾಗಿದ್ದು ಆ ಸಮಾರಂಭದಲ್ಲಿ ವೈರಲ್ ಆದ ಒಂದು ಫೋಟೋದ ಮೂಲಕ. ಏನೆಂದರೆ, ಸಿದ್ದರಾಮಯ್ಯ ಆ ಕಾರ್ಯಕ್ರಮದಲ್ಲಿ 5ನೇ ಸಾಲಿನ ಸೀಟ್ ಒಂದರಲ್ಲಿ ಕುಳಿತಿದ್ದರು. ಹಾಗೆಯೇ ಅವರು ಎದುರುಗಡೆ ಕುಳಿತಿರುವವರನ್ನು ನೋಡುತ್ತಿರುವ ಒಂದು ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಬಿಜೆಪಿಯ ಸೋಷಿಯಲ್ ಮೀಡಿಯಾ ಸೇರಿದಂತೆ ಅನೇಕ ಟ್ರೋಲರ್ಗಳು ಅಹಿಂದ ನಾಯಕನನ್ನು ಕಡೆಗಣಿಸಿದ ಕಾಂಗ್ರೆಸ್ ಎಂಬಂತಹ ಟೈಟಲ್ಗಳನ್ನು ಕೊಟ್ಟು ಪಾಸಿಟಿವ್ ಹಾಗೂ ನೆಗೆಟಿವ್ ಟ್ರೋಲ್ಗಳನ್ನು ಮಾಡೋಕೆ ಶುರು ಮಾಡಿದ್ವು. ಆದರೆ ಇದೀಗ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ಟ್ರೋಲ್ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ತಡವಾಗಿ ಹೋಗಿದ್ದೆ, ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ – ಸಿದ್ದರಾಮಯ್ಯ
ಸಿದ್ದರಾಮಯ್ಯರವರು ಹಂಚಿಕೊಂಡಿರುವ ಪೋಸ್ಟರ್ನಲ್ಲಿರುವಂತೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ.
ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಕುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ ಎಂಬಂತಹ ಸ್ಪಷ್ಟನೆಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಈ ಒಂದು ಪೋಸ್ಟ್ನಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ನೆಗೆಟಿವ್ ಟ್ರೋಲ್ಗಳ ಬಾಯನ್ನು ಮುಚ್ಚಿಸಿದಂತಾಗಿದೆ.
